A part of Indiaonline network empowering local businesses

ಅನಂತನಾಗ್ ಎನ್ಕೌಂಟರ್: ಉಗ್ರರ ಗುಂಡಿಗೆ ಇಬ್ಬರು ಸೇನಾಧಿಕಾರಿ, ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮ!

News

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿದ್ದ ಇಬ್ಬರು ಸೇನಾಧಿಕಾರಿಗಳು ಮತ್ತು ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಎನ್‌ಕೌಂಟರ್‌ನಲ್ಲಿ ಕರ್ನಲ್, ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕದ ಮೇಜರ್ ಶ್ರೇಣಿಯ ಇಬ್ಬರು ಅಧಿಕಾರಿಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉಪ ಅಧೀಕ್ಷಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಹಿಮನ್ಯುನ್ ಮುಜಾಮಿಲ್ ಭಟ್ ಅವರು ಗುಂಡಿನ ಚಕಮಕಿಯಲ್ಲಿ ಹತರಾಗಿದ್ದು, ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು 19 ರಾಷ್ಟ್ರೀಯ ರೈಫಲ್ಸ್ (19 RR) ಘಟಕದ ಕಮಾಂಡಿಂಗ್ ಅಧಿಕಾರಿಯಾಗಿದ್ದರು. ರಾಷ್ಟ್ರೀಯ ರೈಫಲ್ಸ್ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನೆಯ ಬಂಡಾಯ ನಿಗ್ರಹ ಪಡೆ ಇದಾಗಿದೆ.ಅನಂತನಾಗ್‌ನ ಕೋಕರ್‌ನಾಗ್ ಪ್ರದೇಶದ ದಟ್ಟ ಅರಣ್ಯದಲ್ಲಿ ಭಯೋತ್ಪಾದಕರು ನಡೆಸಿದ ಭಾರೀ ಗುಂಡಿನ ದಾಳಿಯ ನಡುವೆ ಪೊಲೀಸ್ ಅಧಿಕಾರಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಸೇನೆಯ 15 ಕಾರ್ಪ್ಸ್ ಕಮಾಂಡರ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಸೇರಿದಂತೆ ಉನ್ನತ ಅಧಿಕಾರಿಗಳು ಎನ್‌ಕೌಂಟರ್ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಮತ್ತು ಮೃತದೇಹಗಳ ತೆರವು ಕಾರ್ಯದ ಮೇಲ್ವಿಚಾರಣೆ ಮಾಡಿದ್ದಾರೆ.

ಇದನ್ನೂ ಓದಿ: ರಜೌರಿ ಎನ್​ಕೌಂಟರ್​: ಯೋಧರನ್ನು ರಕ್ಷಿಸಿ ಉಗ್ರರ ಗುಂಡೇಟಿಗೆ ಭಾರತೀಯ ಸೇನೆಯ 6 ವರ್ಷದ ಶ್ವಾನ 'ಕೆಂಟ್' ಬಲಿ; ಇಬ್ಬರು ಉಗ್ರರು ಹತ!

ಎನ್‌ಕೌಂಟರ್ ಸ್ಥಳದಲ್ಲಿ ಕಣ್ಗಾವಲು ಮತ್ತು ತೆರವು ಕಾರ್ಯಾಚರಣೆಗಾಗಿ ಸೇನೆಯ ಚೀತಾ ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ ನಿನ್ನೆ ತಡರಾತ್ರಿ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಕಮಾಂಡಿಂಗ್ ಆಫೀಸರ್ ಮತ್ತು ಡೆಪ್ಯುಟಿ ಸೂಪರಿಂಟೆಂಡೆಂಟ್ ನೇತೃತ್ವದ ಪಡೆಗಳು ಉಗ್ರರ ವಿರುದ್ಧ ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ಕಾರ್ಯಾಚರಣೆಯಲ್ಲಿ ಈ ವರೆಗೂ ಮೂವರು ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಉಗ್ರರ ಗುಂಡೇಟಿಗೆ ಕುಕಿ-ಝೋ ಬುಡಕಟ್ಟಿನ ಮೂವರು ಬಲಿ!

ಕಳೆದ 24 ಗಂಟೆಗಳಲ್ಲಿ ಇದು ಎರಡನೇ ಉಗ್ರರೊಂದಿಗಿನ ಮುಖಾಮುಖಿಯಾಗಿದೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಭೀಕರ ಎನ್‌ಕೌಂಟರ್‌ನಲ್ಲಿ ಒಬ್ಬ ಸೇನಾ ಯೋಧ ಹುತಾತ್ಮರಾಗಿದ್ದರು ಮತ್ತು ಮೂವರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಕೂಡ ಹತರಾಗಿದ್ದು, ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
  (KANNAD PRABHA)

12 Days ago