A part of Indiaonline network empowering local businesses Chaitra Navratri

ಅಪಾಯದಲ್ಲಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಪ್ರಜಾಪ್ರಭುತ್ವವಲ್ಲ; ರಾಹುಲ್ ಗಾಂಧಿ ವಿರುದ್ಧ ಜೆಪಿ ನಡ್ಡಾ ಕಿಡಿ

news

ಚಿತ್ರದುರ್ಗ: ಲಂಡನ್ ನಲ್ಲಿ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ಕ್ರಮಗಳು ಅತ್ಯಂತ ಖಂಡನೀಯ. ಜನರನ್ನು ವಿಭಜಿಸುವುದಷ್ಟೇ ಕಾಂಗ್ರೆಸ್'ಗೆ ಗೊತ್ತು. ಪ್ರಸ್ತುತ ದೇಶದಲ್ಲಿ ಅಪಾಯದಲ್ಲಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಪ್ರಜಾಪ್ರಭುತ್ವವಲ್ಲ ಎಂದು ಹೇಳಿದರು.

ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷಿಸಿದ್ದಾರೆ ಎಂಬ ಕಾರಣಕ್ಕಾಗಿ ರಾಹುಲ್ ಗಾಂಧಿ ವಿದೇಶದ ನೆಲದಲ್ಲಿ ದೇಶದ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡುತ್ತಿರುವ ರಾಹುಲ್ ಗಾಂಧಿಯವರು, ತಮ್ಮ ಅಜ್ಜಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದನ್ನು ಸ್ಮರಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಡಿಜಿಟಲೀಕರಣ ಭಾರತದಲ್ಲಿ ಸಾಧ್ಯವಿಲ್ಲ ಎಂದು ಟೀಕಿಸಿತ್ತು. ಆದರೆ, ಇಂದು ವಿಶ್ವದ ಶೇಕಡಾ 40 ರಷ್ಟು ಡಿಜಿಟಲ್ ವಹಿವಾಟು ಭಾರತದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರ, ಕಮಿಷನ್, ಅಪರಾಧೀಕರಣ ಮತ್ತು ವಂಶಾಡಳಿತದ ರಾಜಕೀಯವನ್ನು ಉತ್ತೇಜಿಸಿದೆ. ಆದರೆ, ಪ್ರಧಾನಿ ಮೋದಿಯವರು ‘ರಿಪೋರ್ಟ್ ಕಾರ್ಡ್’ ರಾಜಕಾರಣ ಆರಂಭಿಸಿದ್ದಾರೆ. ಹೇಳಿದನ್ನು ಮಾಡಿ ತೋರಿಸಿದ್ದಾರೆ. ಜವಾಬ್ದಾರಿಯುತ ಮತ್ತು ಬಲವಾದ ಸರ್ಕಾರವನ್ನು ರೂಪಿಸಿದ್ದಾರೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದು ನಮ್ಮ ವಿಜಯ ಸಂಕಲ್ಪ ಯಾತ್ರೆಯಲ್ಲ, ಕರ್ನಾಟಕದ ವಿಜಯ (ವಿಜಯ್) ಯಾತ್ರೆ ಎಂದು ಹೇಳಿದರು.

‘ಮೋದಿ ತೇರಿ ಕಬರ್ ಖುದೇಗಿ’ ಎಂದು ಹೇಳುವಷ್ಟು ‘ಕಾಂಗ್ರೆಸ್’ ಭಾಷೆ ಕೆಟ್ಟು ಹೋಗಿದೆ. ಆದರೆ, ಜನ ‘ಮೋದಿ ತೇರಾ ಕಮಲ್ ಖಿಲೇಗಾ’ ಎನ್ನುತ್ತಿದ್ದಾರೆ. ಇಡೀ ಜಗತ್ತೇ ಭಾರತವನ್ನು ಹೊಗಳಿ ಆರ್ಥಿಕವಾಗಿ ಬೆಳೆಯುತ್ತಿದೆ ಎಂದು ಹೇಳುತ್ತಿದೆ. ಆದರೆ, ರಾಹುಲ್ ಗಾಂಧಿ ಮಾತ್ರ ವಿದೇಶದಲ್ಲಿ ಭಾರತವನ್ನು ಅವಮಾನಿಸಿದ್ದಾರೆಂದು ಕಿಡಿಕಾರಿದರು.

ಇತ್ತೀಚೆಗೆ ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಭಾರತೀಯ ಪ್ರಜಾಪ್ರಭುತ್ವವು ಒತ್ತಡದಲ್ಲಿದೆ ಮತ್ತು ದಾಳಿಗೆ ಒಳಗಾಗಿದೆ ಎಂದು ಹೇಳಿದ್ದರು.
 
  (KANNAD PRABHA)

6 Days ago