ಕಾಬೂಲ್: ಎರಡು ಪ್ರತ್ಯೇಕ ಘಟನೆಯಲ್ಲಿ ಅಫ್ಘಾನಿಸ್ಥಾನದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 80 ವಿದ್ಯಾರ್ಥಿನಿಯರಿಗೆ ವಿಷಪ್ರಾಶನ ಮಾಡಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ಶಿಕ್ಷಣ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದು, 2021 ರಲ್ಲಿ ಆಫ್ಘಾನಿಸ್ಥಾನದಲ್ಲಿ ತಾಲೀಬಾನ್ ಆಡಳಿತ ಬಂದ ನಂತರ ಈ ರೀತಿಯಾಗಿ ನಡೆಯುತ್ತಿರುವ ಮೊದಲ ಪ್ರಕರಣ ಇದಾಗಿದೆ. ಆಫ್ಘಾನಿಸ್ಥಾನದಲ್ಲಿ ತಾಲೀಬಾನ್ ಆಡಳಿತ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಹಕ್ಕುಗಳನ್ನು ಕಸಿದುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಹುಟ್ಟುವುದಕ್ಕೆ ಮುಂಚೆಯೇ ಭಾರತದಲ್ಲಿ ಹುಟ್ಟಿತ್ತು: ಸಿದ್ದುಗೆ ಕಟೀಲ್ ತಿರುಗೇಟು
ವಿಶ್ವವಿದ್ಯಾನಿಲಯ ಸೇರಿದಂತೆ ಆರನೇ ತರಗತಿಯ ನಂತರದ ಶಿಕ್ಷಣ ಪಡೆಯುವುದರಿಂದ ಹೆಣ್ಣುಮಕ್ಕಳಿಗೆ ನಿಷೇಧ ವಿಧಿಸಲಾಗಿದ್ದು, ಮಹಿಳೆಯರಿಗೆ ಉದ್ಯೋಗಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ ವಿಧಿಸಲಾಗಿದೆ.
ವ್ಯಕ್ತಿಯೋರ್ವನ ವೈಯಕ್ತಿಕ ದ್ವೇಷದ ಕಾರಣದಿಂದ ವಿಷಪ್ರಾಶನ ಘಟನೆ ನಡೆದಿದೆ ಎಂದು ಶಿಕ್ಷಣ ಅಧಿಕಾರಿ ಹೇಳಿದ್ದು, ವಿವರಣೆ ನೀಡಲು ನಿರಾಕರಿಸಿದ್ದಾರೆ. ಸರ್-ಎ-ಪುಲ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು ಎರಡೂ ಘಟನೆಗಳು ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. (KANNAD PRABHA)