A part of Indiaonline network empowering local businesses

ಎಸ್ಎಸ್ಎಲ್ ಸಿ-ಪಿಯುಸಿ ಮಂಡಳಿ ವಿಲೀನ: ಕೆಎಎಸ್ಇಎಬಿ ಎಂದು ಮರುನಾಮಕರಣ; ಒಂದೇ ಸೂರಿನಡಿ ಎರಡು ಪರೀಕ್ಷೆಗಳು!

News

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಅನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಎಂದು ಮರುನಾಮಕರಣ ಮಾಡಲಾಗಿದೆ, ಹೀಗಾಗಿ ಇನ್ನು ಮುಂದೆ ಪಿಯು ಬೋರ್ಡ್ ಪರೀಕ್ಷೆಗಳು ಮತ್ತು ಎಸ್ ಎಸ್ ಎಲ್ ಸಿ ಬೋರ್ಡ್ ಪರೀಕ್ಷೆಗಳನ್ನು ಒಂದೇ ಅಧಿಕಾರದ ಅಡಿಯಲ್ಲಿ ಬರಲಿದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವಿಲೀನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವಿಲೀನಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ವಿಧೇಯಕ-2022 ವಿಧಾನಸಭೆಯಲ್ಲಿ ಅನುಮೋದನೆಗೊಂಡಿತ್ತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್‌ ವಿಧೇಯಕ ಉದ್ದೇಶಗಳನ್ನು ವಿವರಿಸಿ ಅಂಗೀಕಾರ ಪಡೆದುಕೊಂಡಿದ್ದರು. ಹೊಸ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ಎರಡು ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಿ ಕರ್ನಾಟಕ ಶಾಲಾ ಪರೀಕ್ಷಾ ಮೌಲ್ಯನಿರ್ಣಯ ಮಂಡಳಿ ಎಂದು ನಾಮಕರಣ ಮಾಡಲಾಗಿದೆ.

2022-23 ನೇ ಸಾಲಿನಿಂದಲೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಗಳು ಒಂದೇ ಮಂಡಳಿಯಡಿ ನಡೆಯುತ್ತವೆ. ಐಎಎಸ್‌ ಶ್ರೇಣಿಯ ಅಧಿಕಾರಿಯನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪಿಯು ಇಲಾಖೆಯಿಂದ ಜಂಟಿ ನಿರ್ದೇಶಕ ಶ್ರೇಣಿಗಿಂತ ಕೆಳಗಿನವರಲ್ಲದ ತಲಾ ಒಬ್ಬರಂತೆ ನಿರ್ದೇಶಕರು ಮತ್ತು ಕಾರ್ಯದರ್ಶೀಗಳು ಇರಲಿದ್ದಾರೆ.

ಹೊಸ ಶಿಕ್ಷಣ ನೀತಿಯ ಅನ್ವಯ ಈ ವಿಧೇಯಕವನ್ನು ತರಲಾಗಿದೆ. ಪಿಯುಸಿ ನಿರ್ದೇಶಕರಿಗೆ ಪರೀಕ್ಷೆ ಕಡೆ ಗಮನಹರಿಸಿಕೊಂಡು ಆಡಳಿತ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕಡೆಯೂ ನೋಡಬೇಕಿದೆ. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಕಷ್ಟಕರವಾಗಿದೆ. ಹೀಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಒಗ್ಗೂಡಿಸಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಂದು ಮಾಡಲಾಗಿದೆ.

ಏತನ್ಮಧ್ಯೆ,  ರಾಷ್ರೀಯ ಶಿಕ್ಷಣ ನೀತಿಯ ಭಾಗವಾಗಿ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಮಾಪನಗಳನ್ನು ಪರಿಚಯಿಸುವ ಸಾಧ್ಯತೆಯ ಬಗ್ಗೆ ಚರ್ಚಿಸಲು ಸಚಿವರು ಗುರುವಾರ ಸಭೆ ಕರೆಯಲಿದ್ದಾರೆ.

5+3+3+4 ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಸ್ತಾಪಿಸಲಾದ ಮಗುವಿನ ಪ್ರತಿಯೊಂದು ಶಿಕ್ಷಣದಲ್ಲಿ ಮೌಲ್ಯಮಾಪನದ ರೂಪವನ್ನು ಜಾರಿಗೊಳಿಸಲು ಇಲಾಖೆಯು ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ. (AIR NEWS)

557 Days ago