A part of Indiaonline network empowering local businesses

ಒಂದಷ್ಟು ಬದಲಾವಣೆ ಮಾಡಿಕೊಂಡರೆ ಮಾತಿನಲ್ಲಿ ಮಾತ್ರವಲ್ಲ ಕೃತಿಯಲ್ಲೂ ಭಾರತ ಭವ್ಯವಾಗಬಹುದು! (ಹಣಕ್ಲಾಸು)

News

ಇತ್ತೀಚಿನ ದಿನಗಳಲ್ಲಿ ಹೋದ ಕಡೆಯೆಲ್ಲ 'ಮುಂದಿನ ಎರಡು ದಶಕ ಭಾರತಕ್ಕೆ ಸೇರಿದ್ದು' ಎನ್ನುವ ಮಾತುಗಳನ್ನ ಹೇಳದೆ ವಾಪಸ್ಸು ಬರುತ್ತಿಲ್ಲ. ಅದಕ್ಕೆ ಕಾರಣ ಸ್ಪಷ್ಟವಿದೆ. ಕರೋನ ಜಗತ್ತನ್ನ ಭಾದಿಸುವ ಮುನ್ನವೇ ಯೂರೋಪು ಮತ್ತು ಅಮೇರಿಕಾ ದೇಶಗಳಿಗೆ ಚೀನಾ ದೇಶದ ಮೇಲಿನ ಹೆಚ್ಚಿದ ಅವಲಂಬನೆಯ ಅರಿವಾಗಿತ್ತು.

ಪಾಶ್ಚಾತ್ಯರಿಗೆ ಒಂದು ದೇಶದ ಮೇಲಿನ ಅತಿ ಹೆಚ್ಚಿನ ಅವಲಂಬನೆ ಒಂದಲ್ಲ ಒಂದು ದಿನ ಅಪಾಯವಾಗಿ ಪರಿವರ್ತನೆಯಾಗುತ್ತದೆ, ನಾವು ಮಾಡಿದ್ದು ತಪ್ಪು ಎನ್ನುವುದರ ಅರಿವಾಗಿತ್ತು. ಹೀಗಾಗಿ ಚೀನಾ ಪ್ಲಸ್ ಒನ್ ಎನ್ನುವ ನೀತಿಯನ್ನ ಅವರು ಜಪಿಸ ತೊಡಗಿದ್ದರು. ಹೀಗೆ ಚೀನಾ ಪ್ಲಸ್ ಒನ್ ಎಂದಾಗ ಚೀನವನ್ನ ಬೇಡವೆಂದ ತಕ್ಷಣ ಬಿಸಾಡಲು ಆಗುವುದಿಲ್ಲ ಎನ್ನುವುದನ್ನ ಒಪ್ಪಿಕೊಂಡಂತ್ತಿತ್ತು , ಅದರ ಜೊತೆಗೆ ಇನ್ನೊಂದು ದೇಶವನ್ನ ಸಹ ಚೀನಾ ದೇಶಕ್ಕೆ ಸೆಡ್ಡು ಹೊಡೆಯುವಂತೆ ಬೆಳಸಬೇಕು ಎನ್ನುವ ಮನೋಭಾವ ಕೂಡ ಕಾಣುತ್ತಿತ್ತು. ಹೀಗೆ ಗಾತ್ರದಲ್ಲಿ , ಜನಸಂಖ್ಯೆಯಲ್ಲಿ , ಕೆಲಸಕ್ಕೆ ಬೇಕಾಗುವ ಅರೆ ನೈಪುಣ್ಯ ಹೊಂದಿರುವ ವರ್ಕ್ ಫೋರ್ಸ್ ಜೊತೆಗೆ ಕಳೆದ ಎಂಟು ವರ್ಷಗಳಿಂದ ಯಾವುದೇ ರೀತಿಯ ದಂಗೆ , ಗಲಭೆಗಳಾಗದೆ , ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯುಳ್ಳ ದೇಶ ಭಾರತ.

ಹೀಗಾಗಿ ಭಾರತ ಹೂಡಿಕೆದಾರರ ಕಣ್ಣಿಗೆ ಡಾರ್ಲಿಂಗ್ ಅನ್ನಿಸಿಕೊಂಡಿತು. ಫಾರಿನ್ ಇನ್ವೆಸ್ಟರ್ಸ್ ಪರಿವಾಳಗಳಿದ್ದಂತೆ , ಎಲ್ಲಿ ಒಂದೆರೆಡು ಹೊಸಕಾಳು ಹಾಕುತ್ತಾರೆ ಅಲ್ಲಿಗೆ ಓಡಿ ಹೋಗುತ್ತಾರೆ. ಇದನ್ನ ಭಾರತದಲ್ಲಿ ಪ್ರತ್ಯಕ್ಷವಾಗಿ ಕಂಡಿದ್ದೇವೆ. ಓಡಿ ಹೋದ ಹಕ್ಕಿಗಳು ಅಲ್ಪಕಾಲದಲ್ಲೇ ಮರಳಿ ವಾಪಸ್ಸು ಬಂದದ್ದಕ್ಕೂ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಇದೀಗ ಭಾರತ ಎಲ್ಲಾ ಕೋನಗಳಿಂದ ಅತ್ಯುತ್ತಮ ಸ್ಥಿತಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿದೆ. ಜಾಗತಿಕವಾಗಿ ಸಿಗುತ್ತಿರುವ ಹೊಸ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನ ನಿಭಾಯಿಸಿಸಲು ಸಿದ್ಧವಿದೆ. ಈ ಹೊಸ ಹೊಣೆಗಾರಿಕೆ ಭಾರತವನ್ನ ಪೂರ್ಣವಾಗಿ ಬದಲಾಯಿಸಲಿದೆ. ಮುಂದಿನ ಇಪ್ಪತ್ತು ವರ್ಷದಲ್ಲಿ ಭಾರತದ ಆರ್ಥಿಕತೆ ಹೊಸ ಯಶೋಗಾಥೆಯನ್ನ ಜಗತ್ತಿಗೆ ಸಾರಲಿದೆ. ಎಲ್ಲವೂ ಸರಿ , ಆದರೆ ಭಾರತದ ಮುಂದೆ ಇಂದಿಗೂ ಒಂದಷ್ಟು ಹಳೆ ಸವಾಲುಗಳು ಇನ್ನೂ ಪ್ರಶ್ನೆಯಾಗಿ ಉಳಿದುಕೊಂಡಿವೆ. ಭಾರತ ಅತಿ ವೇಗವಾಗಿ ಇವುಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದಿನ ಇಪ್ಪತ್ತು ವರ್ಷ ನಮ್ಮ ಪಾಲಿಗೆ ಬರೆದುಕೊಳ್ಳುವಾಗ ಎಡವುವ ಸಾಧ್ಯತೆಯಿರುತ್ತದೆ.

ಏನಿದು ಅಂತಹ ಸಾವಾಲುಗಳು ನೋಡೋಣ ಬನ್ನಿ:

ಭ್ರಷ್ಟಾಚಾರ: ಇದು ಮನುಷ್ಯನ ಉಗಮವಾದ ಮರುಗಳಿಗೆಯಲ್ಲಿ ಉತ್ಪನ್ನವಾದದ್ದು ಎನ್ನುವುದು ನಿರ್ವಿವಾದ. ಜಾಗತಿಕವಾಗಿ ಕೂಡ ಇದೊಂದು ದೊಡ್ಡ ಪಿಡುಗು. ಅಮೇರಿಕಾ , ಇಂಗ್ಲೆಂಡ್ , ಜರ್ಮನಿ , ಚೀನಾ ಹೀಗೆ ಎಲ್ಲೆಡೆ ಇದರ ಸಾಮ್ರಾಜ್ಯ ವಿಸ್ತರಿಸಿದೆ. ಹಲವು ದೇಶಗಳಲ್ಲಿ ಇವು ಸಾಮಾನ್ಯ ಜನರಿಗೆ ಘಾಸಿ ಮಾಡುವುದಿಲ್ಲ , ಮೇಲ್ಮಟ್ಟದಲ್ಲಿ ಮಾತ್ರ ಇದರ ಇರುವಿಕೆ ಕಾಣುತ್ತದೆ. ಉಳಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಇದು ಸಾಮಾನ್ಯ ಜನರನ್ನ ಕೂಡ ಬಹಳವಾಗಿ ಕಾಡುತ್ತದೆ. ಭ್ರಷ್ಟಾಚಾರವನ್ನ ಪೂರ್ಣವಾಗಿ ಹೋಗಲಾಡಿಸುವುದು ಇಂದಿಗೆ ಸಾಧ್ಯವಿಲ್ಲದ ಮಾತು.  ಆದರೆ ಇದನ್ನ ಒಂದು ಹಂತ ಮೀರದಂತೆ ನಿಯಂತ್ರಣದಲ್ಲಿಡುವುದು ಅತ್ಯವಶ್ಯಕ. ಇದು ಭಾರತದಲ್ಲಿ ಆಗಬೇಕಾದ ಕೆಲಸ. ಜನ ಸಾಮಾನ್ಯನಿಗೆ ನಿತ್ಯ ಜೀವನದಲ್ಲಿ ಇದು ತಟ್ಟದ ಮಟ್ಟಿಗೆ ಬದಲಾವಣೆ ತರುವುದು ಅನಿವಾರ್ಯ.
ಅನಕ್ಷರತೆ: ಭಾರತದಲ್ಲಿ ಇಂದಿಗೂ ಅಕ್ಷರತೆ ಎನ್ನುವುದು ಮರೀಚಿಕೆ. ಪೂರ್ಣ ಪ್ರಮಾಣದ ಸಾಕ್ಷರತೆ ಹೊಂದಿರುವ ರಾಜ್ಯಗಳ ಕಥೆ ಕೇಳಿದರೆ ನಿಮಗೆ ಅದರ ಅರಿವಾದೀತು. ಯಾರೆಲ್ಲರಿಗೆ ತಮ್ಮ ಹೆಸರನ್ನ ಓದಲು , ಬರೆಯಲು ಬರುತ್ತದೆ , ಸಾಮಾನ್ಯ ಅಕ್ಷರಗಳ ಪರಿಚಯವಿದೆ ಅವರನ್ನ ಅಕ್ಷರಸ್ಥರು ಎಂದು ಘೋಷಿಸಿ ರಾಜ್ಯವನ್ನ ಸಾಕ್ಷರ ರಾಜ್ಯ ಎಂದು ಘೋಷಿಸಲಾಗುತ್ತದೆ. ನಿಜಾರ್ಥದಲ್ಲಿ ಅವರಿಗೆ ಏನೂ ತಿಳಿಯುವುದಿಲ್ಲ. ಇಂತಹ ಜನಸಂಖ್ಯೆಯನ್ನ ಇಟ್ಟುಕೊಂಡು ಜಗತ್ತಿಗೆ ನಾಯಕನಾಗುವ ಕನಸು ಕಾಣುವುದು ಅಸಾಧ್ಯ. ಅಕ್ಷರ ಬಂದವರು ಕೂಡ ಡಿಜಿಟಲ್ ಅನಕ್ಷರಸ್ಥರಾಗಿದ್ದರೆ. ಇಂದಿನ ದಿನದಲ್ಲಿ ಕೇವಲ ಓದಲು , ಬರೆಯಲು ಬಂದವರೆನ್ನೆಲ್ಲ ತಿಳುವಳಿಕೆ ಉಳ್ಳವರು ಎನ್ನಲು ಆಗದು. ತನ್ನ ಜನರ ಜ್ಞಾನವೃದ್ಧಿ ಮಾಡುವ ಹರ್ಕ್ಯುಲೆಸ್ ಟಾಸ್ಕ್ ಭಾರತ ಸರಕಾರದ ಮುಂದಿದೆ .
ಮೂಲ ಸೌಕರ್ಯಗಳಿಗೆ ಬೇಕಿದೆ ಬಂಡವಾಳ: ಒಂದು ದೇಶ ವೇಗವಾಗಿ ಬೆಳೆಯಬೇಕೆಂದರೆ ಅದಕ್ಕೆ ಬಹುಮುಖ್ಯವಾಗಿ ಬೇಕಾಗಿರುವುದು ಕುಶಲ ವೃತ್ತಿಪರರು ಮತ್ತು ಮೂಲ ಸೌಕರ್ಯಗಳಾದ ಸಾರಿಗೆ , ಉತ್ತಮ ರಸ್ತೆ , ಎಲೆಕ್ಟ್ರಿಸಿಟಿ ಮತ್ತು ಇತರೆ ಇಂಧನ ಮೂಲಗಳ ಸೌಲಭ್ಯ. ಇದನ್ನ ಭಾರತ ಸರಕಾರ ಅರಿತಿದೆ. ಹೀಗಾಗಿ ಸಮಾರೋಪಾಧಿಯಲ್ಲಿ ರಸ್ತೆಗಳ ನಿರ್ಮಾಣಕ್ಕೆ ಅದು ಇಳಿದಿದೆ. ಲಕ್ಷಾಂತರ ಮೈಲಿ ರಸ್ತೆಯ ನಿರ್ಮಾಣವಾಗಿದೆ, ಮತ್ತು ಹೊಸ ರಸ್ತೆಯ ನಿರ್ಮಾಣವಾಗುತ್ತಿದೆ. ಇದಕ್ಕೆ ಬೇಕಾಗುವ ಬಂಡವಾಳವನ್ನ ಕೂಡ ಯಾವುದೇ ಮುಜುಗರವಿಲ್ಲದೆ ಕೇಂದ್ರ ಸರಕಾರ ಬಾಂಡ್ ಹೊರಡಿಸುವ ಮೂಲಕ ಹಣವನ್ನ ಸಂಗ್ರಹಿಸುತ್ತಿದೆ. ಇತ್ತೀಚಿಗಷ್ಟೇ ಶ್ರೀ ಗಡಕರಿ ಅವರು NHAI InvIT bonds ಪ್ರತಿ ಹದಿನೈದು ದಿನಕೊಮ್ಮೆ ಹೊರಡಿಸುವುದಾಗಿ ಹೇಳಿದ್ದಾರೆ. ಇಲ್ಲಿ ಕನಿಷ್ಠ ಮೊತ್ತ ೧೦ ಸಾವಿರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ವಾರ್ಷಿಕ ೮.೫ ಪ್ರತಿಶತ ಬಡ್ಡಿಯನ್ನ ಕೂಡ ನೀಡಲಾಗುತ್ತದೆ. ಎಲ್ಲಾ ಪ್ರಜೆಗಳೂ ಇದರ ಲಾಭವನ್ನ ಪಡೆದುಕೊಳ್ಳಿ ಎನ್ನುವ ಹೇಳಿಕೆಯನ್ನ ನೀಡಿದ್ದಾರೆ. ನವಭಾರತ ನಿರ್ಮಾಣವಾಗುವ ಉತ್ಸಾಹ ಗಡಕರಿಯವರ ಧ್ವನಿಯಲ್ಲಿ ಇದ್ದದ್ದು ಸ್ಪಷ್ಟ.
ಡಿಜಿಟಲ್ ಫ್ರಾಡ್ಗೆ ಹಾಕಬೇಕಿದೆ ಕಡಿವಾಣ: ಹೇಳಿಕೇಳಿ ನಮ್ಮದು ಅರೆ ಕಲಿತ ಸಮಾಜ. ಇಂದು ಎಲ್ಲವೂ ಡಿಜಿಟಲ್ ಮಯವಾಗಿ ಹೋಗಿದೆ. ಇದರ ಬಗ್ಗೆ ಅರಿವಿಲ್ಲದ ಜನರ ಸಂಕಷ್ಟ ಹೇಳತೀರದು. ಜನರಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತುಂಬುವ ಕೆಲಸವಾಗಬೇಕಿದೆ. ಮೊದಲು ಅವರಿಗೆ ತಿಳುವಳಿಕೆ ನೀಡುವ ಕೆಲಸ ಮಾಡುವ ಬದಲು ಅವರ ಮೇಲೆ ಡಿಜಿಟಲೀಕರಣವನ್ನ ಹೇರಲಾಗಿದೆ. ಇದೀಗ ಭಾರತದಲ್ಲಿ ಈ ಮಾಧ್ಯಮದ ಮೂಲಕ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅಚ್ಚರಿಯ ವಿಷಯವೆಂದರೆ ಇಲ್ಲಿ ಕಲಿತವರು ಕೂಡ ಹಣವನ್ನ ಕಳೆದುಕೊಳ್ಳುತ್ತಿದ್ದಾರೆ. ಹೊಸ ಹೊಸ ರೀತಿಗಳಲ್ಲಿ ಹಣವನ್ನ ದೋಚುವ ಕೆಲಸವಾಗುತ್ತಿದೆ. ಸರಕಾರ ಇಂತಹ ಫ್ರಾಡ್ಗಳಿಗೆ ಕಡಿವಾಣ ಹಾಕಬೇಕಿದೆ. ಮತ್ತು ಈ ರೀತಿಯ ಹಣವನ್ನ ಕಳೆದುಕೊಂಡವರಿಗೆ ಅವರ ತಪ್ಪಿಲ್ಲದೆ ಆಗಿದ್ದರೆ ಅದನ್ನ ೪೮ ಗಂಟೆಗಳಲ್ಲಿ ಹಿಂತಿರುಗಿಸುವ ಕೆಲಸ ಆಗಬೇಕಿದೆ. ಎಲ್ಲಕ್ಕೂ ಮೊದಲು ಇದರ ನಿಯಂತ್ರಣಕ್ಕೆ ಬೇಕಾಗುವ ಕಾಯ್ದೆಯನ್ನ ತರಬೇಕಾಗಿದೆ.
ನಿಲ್ಲದ ಹಣದುಬ್ಬರಕ್ಕೆ ಹಾಕಬೇಕಿದೆ ಬ್ರೇಕ್: ಎಷ್ಟೇ ದೊಡ್ಡ ಮಟ್ಟದ ಅಭಿವೃದ್ಧಿ ಹೊಂದಿದರೂ ಹಣದುಬ್ಬರವನ್ನ ನಿಯಂತ್ರಣಕ್ಕೆ ತರದಿದ್ದರೆ , ಮಾಡಿದ ಎಲ್ಲಾ ಕೆಲಸವೂ ಹೊಳೆಯಲ್ಲಿ ಹುಣಸೆಹಣ್ಣು ಹಿಂಡಿದಂತೆ ಆಗುತ್ತದೆ. ಇಂದಿಗೆ ಭಾರತವನ್ನ ಭಾದಿಸುತ್ತಿರುವ ಅತಿ ಮುಖ್ಯ ಸಮಸ್ಯೆಗಳಲ್ಲಿ ಹಣದುಬ್ಬರ ಕೂಡ ಪ್ರಮುಖವಾದದ್ದು. ಭಾರತ ಸರಕಾರ ಮತ್ತು ಆರ್ಬಿಐ ಹಣದುಬ್ಬರ ನಿಯಂತ್ರಣಕ್ಕೆ ಎಲ್ಲಾ ಕಸರತ್ತು ನಡೆಸುತ್ತಿವೆ. ಆದರೂ ಮುಂದಿನ ಎರಡು ದಶಕ ಅದನ್ನ ನಿಯಂತ್ರಣದಲಿಟ್ಟರೆ ಮಾತ್ರ ನಾವಂದು ಕೊಂಡ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ. ಹಣದುಬ್ಬರ ಎನ್ನುವುದು ಎರಡು ಅಲುಗಿನ ಖತ್ತಿ ಇದ್ದಂತೆ , ಇದು ಹೆಚ್ಚು ಆಗಬಾರದು ಅದೇ ಸಮಯದಲ್ಲಿ ಅತಿ ಕಡಿಮೆಯೂ ಆಗಬಾರದು. ಅದಕ್ಕೆ ಹಣದುಬ್ಬರವನ್ನ ನಾನು ಸದಾ ಸಕ್ಕರೆ ಖಾಯಿಲೆಗೆ ಹೋಲಿಸುತ್ತಿರುತ್ತೇನೆ. ಇದನ್ನ ನಿಯಂತ್ರಣದಲ್ಲಿಡುವುದು ಅತಿ ಮುಖ್ಯ.
ಸೌತ್ ಏಷ್ಯಾ ದಲ್ಲಿ ಹೆಚ್ಚುತ್ತಿರುವ ಅಸ್ಥಿರತೆಯನ್ನ ಮೀರಿ ಬೆಳೆಯಬೇಕಿದೆ: ನಾವು ಸುಖ ಶಾಂತಿಯಿಂದ ಜೀವಿಸಲು ನೆರೆ ಹೊರೆಯವರು ಕೂಡ ಪರವಾಗಿಲ್ಲ ಎನ್ನುವ ಮಟ್ಟದಲ್ಲಿ ಖುಷಿಯಾಗಿರುವುದು ಅವಶ್ಯಕ. ನಮ್ಮ ನೆರೆ ರಾಷ್ಟ್ರಗಳಾದ ಬಾಂಗ್ಲಾ , ಪಾಕಿಸ್ತಾನ , ಶ್ರೀಲಂಕಾ , ಅಫ್ಘಾನ್ ಎಲ್ಲವೂ ಇನ್ನಿಲದೆ ನೆಲ ಕಚ್ಚಿವೆ. ಏಷ್ಯಾದ ಎಂಜಿನ್ ಎಂದು ಹೆಸರಾಗಿದ್ದ ಚೀನಾ ಕೂಡ ಬಸವಳಿದು ಕೂತಿದೆ. ಒಟ್ಟಿನಲ್ಲಿ ಸೌತ್ ಏಷ್ಯಾದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅಸ್ಥಿರತೆ ಹೆಚ್ಚಾಗಿದೆ. ಜನರು ಸಾಮಾನ್ಯ ಬದುಕನ್ನ ನಡೆಸಲು ಕೂಡ ಬವಣೆ ಪಡುವಂತಾಗಿದೆ. ಈ ಸಮಸ್ಯೆಯನ್ನ ಭಾರತ ಜಾಣತನದಿಂದ ಪರಿಹರಿಸಿಕೊಳ್ಳಬೇಕಾಗಿದೆ.
ಆಂತರಿಕವಾಗಿ ಹೆಚ್ಚುತ್ತಿರುವ ಭಿನ್ನ ಧ್ವನಿಗೆ ಪರಿಹಾರ ಕಂಡುಕೊಳ್ಳಬೇಕಿದೆ: ಒಂದು ದೇಶದ ಅಭಿವೃದ್ಧಿಗೆ ಬಾಹ್ಯ ಕಾರಣಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಥವಾ ಅದಕ್ಕಿಂತ ಹೆಚ್ಚು ಮುಖ್ಯವಾಗುವುದು ಆಂತರಿಕ ಕಾರಣಗಳು. ಭಾರತ ಇಂದಿಗೆ ಒಡೆದ ಮನೆಯಾಗಿದೆ. ವಿಷಯ ಯಾವುದೇ ಇರಲಿ ಅಲ್ಲಿ ಎರಡು ಬಣಗಳು ಹುಟ್ಟಿಕೊಳ್ಳುತ್ತವೆ. ಅಲ್ಲಿ ಕಚ್ಚಾಟ ಶುರುವಾಗುತ್ತದೆ. ಒಂದು ಸುಸ್ಥಿರ ಸಮಾಜದ ಸೃಷಿಯಾಗಲು ಒಡಕು ಮಾತುಗಳಿಗೆ ಹೆಚ್ಚಿನ ಅವಕಾಶವಿರಬಾರದು. ನಿಂದಕರಿರಬೇಕಯ್ಯಾ ಮಂದಿಯೊಳಗ ಎಂದಿದ್ದಾರೆ ಹಿರಿಯರು , ನಿಂದನೆ ಬೇಡವೆನ್ನುವುದಿಲ್ಲ ಆದರೆ ನಿಂದನೆಯೇ ಕಾಯಕವಾಗಬಾರದು ಅಲ್ಲವೇ ? ಕೆಲಸ ಹೆಚ್ಚು ಮಾತು ಕಡಿಮೆ ಎನ್ನುವ ವೇಳೆಯಲ್ಲಿ ನಾವಿದ್ದೇವೆ.
ಕೊನೆಮಾತು: ಮೊದಲ ಸಾಲುಗಳಲ್ಲಿ ಹೇಳಿದಂತೆ ಭಾರತವನ್ನ ಬರಿ ಬಾಯಿ ಮಾತಿನಲ್ಲಿ ಮಾತ್ರವಲ್ಲದೆ ಕೃತಿಯಲ್ಲೂ ಭವ್ಯವಾಗಿಸುವ ಅವಕಾಶ ನಮ್ಮ ಮುಂದಿದೆ. ಅದನ್ನ ಸಮರ್ಥವಾಗಿ ಬಳಸಿಕೊಳ್ಳುವ ಜಾಣತನ ನಮ್ಮದಾಗಬೇಕಿದೆ. ಭಾರತ ಭವ್ಯ ಹೇಗಾಗುತ್ತದೆ ? ಅಲ್ಲಿನ ಜನರ ಬದುಕು ಸುಂದರವಾಗುತ್ತ ಹೋದಂತೆ ಭಾರತ ತಾನಾಗೇ ಭವ್ಯವಾಗುತ್ತದೆ. ಈ ನಿಟ್ಟಿನಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಮೇಲಿನ ಸಮಸ್ಯೆಗಳಿಗೆ ಆದಷ್ಟೂ ಪರಿಹಾರ ಹುಡಕುವ ಪ್ರಯತ್ನ ಮಾಡಬೇಕಿದೆ. ಭಾರತದ ಯಶೋಗಾಥೆಯ ಜೊತೆಗೆ ನಮ್ಮ ಹೆಸರನ್ನ ಬರೆದುಕೊಳ್ಳುವ ಸುವರ್ಣಾವಕಾಶ ಎಲ್ಲರ ಮುಂದಿದೆ. ಸಮಸ್ಯೆಗಳಿವೆ , ನಾವು ಸಮಸ್ಯೆಯ ಭಾಗವಾಗಬೇಕೋ ಅಥವಾ ಪರಿಹಾರದ್ದೋ ಎನ್ನುವ ನಿರ್ಣಯ ನಾವು ಮಾಡಬೇಕಿದೆ. (KANNAD PRABHA)

52 Days ago