A part of Indiaonline network empowering local businesses

ಗ್ಯಾಂಗ್ ಸ್ಟರ್ ಅತಿಕ್ ಹತ್ಯೆ: ಯುಪಿ ಪೊಲೀಸರಿಗೆ ಎನ್ ಎಚ್ ಆರ್ ಸಿ ನೋಟಿಸ್ ಜಾರಿ

News

ಪ್ರಯಾಗ್ ರಾಜ್: ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಉತ್ತರ ಪ್ರದೇಶ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರು ಮತ್ತು ಪ್ರಯಾಗ್‌ರಾಜ್‌ನ ಪೊಲೀಸ್ ಆಯುಕ್ತರಿಗೆ ನೋಟಿಸ್ ನೀಡಿದ್ದು, ನಾಲ್ಕು ವಾರಗಳಲ್ಲಿ ವರದಿಯನ್ನು ಆಯೋಗ ಕೇಳಿದೆ. 

ಹತ್ಯೆಗೆ ಕಾರಣವಾದ ಎಲ್ಲಾ ಅಂಶಗಳು, ಮೃತರಿಗೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣ ಪತ್ರ, ವಿಚಾರಣೆಯ ವರದಿ, ಮರಣೋತ್ತರ ಪರೀಕ್ಷೆಯ ವರದಿ, ಮರಣೋತ್ತರ ಪರೀಕ್ಷೆಯ ಸಿಡಿ, ವೀಡಿಯೊ, ಕ್ಯಾಸೆಟ್, ಮ್ಯಾಜಿಸ್ಟ್ರಿಯಲ್ ವಿಚಾರಣೆ ವರದಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ವರದಿಯಲ್ಲಿ ಸಲ್ಲಿಸುವಂತೆ ತಿಳಿಸಲಾಗಿದೆ. 

ಇದನ್ನೂ ಓದಿ: "ನನ್ನನ್ನು ಹತ್ಯೆ ಮಾಡಿದರೆ...": ಅತೀಕ್ ಅಹ್ಮದ್ ಪತ್ರ ಮುಚ್ಚಿದ ಲಕೋಟೆಯಲ್ಲಿ ಯುಪಿ ಸಿಎಂ, ಸಿಜೆಐ ಗೆ ರವಾನೆ

ಶನಿವಾರ ರಾತ್ರಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ತಪಾಸಣೆಗಾಗಿ ಪೊಲೀಸ್ ಸಿಬ್ಬಂದಿ ಕರೆದೊಯ್ಯುತ್ತಿದ್ದಾಗ ಪ್ರಯಾಗರಾಜ್‌ನಲ್ಲಿರುವ ವೈದ್ಯಕೀಯ ಕಾಲೇಜಿನ ಹೊರಗಡೆ ಪತ್ರಕರ್ತರ ನೆಪದಲ್ಲಿ ಮೂವರು ಆರೋಪಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಈ ವರ್ಷದ ಆರಂಭದಲ್ಲಿ ಉಮೇಶ್ ಪಾಲ್ ಮತ್ತು ಅವರ ಇಬ್ಬರು ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅವರನ್ನು ಗುಜರಾತ್ ಮತ್ತು ಬರೇಲಿ ಜೈಲುಗಳಿಂದ ಪ್ರಯಾಗ್‌ರಾಜ್‌ಗೆ ಕರೆತರಲಾಗಿತ್ತು. ಹತ್ಯೆಯ  ಭಯಾನಕ ದೃಶ್ಯಗಳು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಟಿವಿ ಚಾನೆಲ್ ಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. (AIR NEWS)

44 Days ago