A part of Indiaonline network empowering local businesses

ಚೈತ್ರಾ ಕುಂದಾಪುರಗೆ ಅನಾರೋಗ್ಯ: ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು; ಹಿಂದುತ್ವದ ಪ್ರಖರ ಪ್ರತಿಪಾದಕಿ ಆತ್ಮಹತ್ಯೆ ಯತ್ನ?

News

ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಐದು ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆಯಿಂದ ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ತಿವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ಎರಡನೇ ದಿನವಾದ ಇಂದು ಚೈತ್ರಾ ಅನಾರೋಗ್ಯದಿಂದ ಕುಸಿದುಬಿದ್ದಿರುವುದಾಗಿ ತಿಳಿದುಬಂದಿದೆ. ಕೂಡಲೇ ಅವರನ್ನು ಸಿಸಿಬಿ ಕಚೇರಿಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಚೈತ್ರಾಳನ್ನು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆತರಲಾಗಿತ್ತು, ಈ ವೇಳೆ ಕುಸಿದು ಬಿದ್ದ ಚೈತ್ರಾರನ್ನು ಸ್ಟ್ರೆಚರ್ ತಂದು ಆಸ್ಪತ್ರೆ ಸಿಬ್ಬಂದಿ ಕರೆದೊಯ್ದಿದ್ದಾರೆ. ಚೈತ್ರಾ ಕುಂದಾಪುರ ಅವರ ಬಾಯಿಯಲ್ಲಿ ನೊರೆ ಬಂದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಸತ್ಯ ಹೊರಬರುತ್ತೆ; ದೊಡ್ಡ ದೊಡ್ಡವರ ಹೆಸರೂ ಹೊರಗೆ ಬರತ್ತೆ: ಚೈತ್ರಾ ಕುಂದಾಪುರ

ವಂಚನೆ  ಪ್ರಕರಣದಲ್ಲಿ ನಂಬರ್‌ ಒನ್‌ ಆರೋಪಿಯಾಗಿರುವ ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹಿಂದುತ್ವದ ಪ್ರಖರ ಪ್ರತಿಪಾದಕಿಯಾಗಿದ್ದು, ಈಗ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆಕೆ ಈಗ ಭಾರಿ ಅಪಮಾನಕ್ಕೆ ಗುರಿಯಾಗಿರುವುದರಿಂದ ತಾನು ಈ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗುವುದು ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಆಕೆ ಸಾವಿಗೆ ಶರಣಾಗಲು ಯತ್ನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬೆಳಗ್ಗೆ ಆಕೆಯನ್ನು ಸಾಂತ್ವನ ಕೇಂದ್ರದಿಂದ ಕರೆತರಲಾಗಿದ್ದು, ಆಕೆ ಈ ನಡುವೆ ವಿಷ ಸೇವಿಸಿದ್ದಾಳೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಒಯ್ಯುವ ವೇಳೆ ಆಕೆಯ ಬಾಯಿಯಿಂದ ನೊರೆ ಬರುತ್ತಿದ್ದು, ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಸೆ. 12ರಂದು ಉಡುಪಿಯಲ್ಲಿ ಬಂಧನಕ್ಕೆ ಒಳಗಾದಾಗಲೂ ಚೈತ್ರಾ ಕುಂದಾಪುರ ಇಂಥಹುದೇ ಪ್ರಯತ್ನ ನಡೆಸಿದ್ದರು. ಅಂದು ಬಂಗಾರದ ಉಂಗುರ ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ ಆಕೆಯನ್ನು ರಕ್ಷಿಸಲಾಗಿತ್ತು. (KANNAD PRABHA)

14 Days ago