ಅಂಕಾರಾ: ಭೂಕಂಪನ ಪೀಡಿತ ಟರ್ಕಿಯಲ್ಲಿ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದ್ದು, ಈ ವೇಳೆ ಕನಿಷ್ಠ 3 ಮಂದಿ ಸಾವಿಗೀಡಾಗಿ 213 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಟರ್ಕಿಯ ದಕ್ಷಿಣ ಹೈಟಿ ಪ್ರಾಂತ್ಯದಲ್ಲಿ ಎರಡು ಹೊಸ ಭೂಕಂಪಗಳಿಂದ (Earthquake) ಮೂವರು ಸಾವನ್ನಪ್ಪಿದ್ದಾರೆ ಮತ್ತು 213 ಮಂದಿ ಗಾಯಗೊಂಡಿದ್ದಾರೆ. ಟರ್ಕಿಯ (Turkey) ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಅವರನ್ನು ಉಲ್ಲೇಖಿಸಿ ಅನಡೋಲು ಸುದ್ದಿ ಸಂಸ್ಥೆ ಈ ವರದಿ ನೀಡಿದೆ.
ಸೋಮವಾರ ಸಂಜೆ ಎರಡು ಹೊಸ ಭೂಕಂಪಗಳು ಟರ್ಕಿಯ ದಕ್ಷಿಣದ ಹೈಟಿ ಪ್ರಾಂತ್ಯದಲ್ಲಿ ಸಂಭವಿಸಿವೆ, ಎರಡು ವಾರಗಳ ನಂತರ ಈ ಪ್ರದೇಶದಲ್ಲಿ ದೊಡ್ಡ ಭೂಕಂಪ ಸಂಭವಿಸಿದೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಟರ್ಕಿಯ ಅನಾಡೋಲು ಏಜೆನ್ಸಿಯ ಪ್ರಕಾರ, ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ (AFAD) ಯನ್ನು ಉಲ್ಲೇಖಿಸಿ, ಭೂಕಂಪವು 6.4 ರ ತೀವ್ರತೆಯನ್ನು ಹೊಂದಿದ್ದು, ಹೈಟಿಯ ಸ್ಥಳೀಯ ಸಮಯದನ್ವಯ ಸುಮಾರು 20.04 ಗಂಟೆಗೆ ಸಂಭವಿಸಿದೆ ಎಂದಿದೆ.
ಎರಡನೇ ಕಂಪನ
ಇನ್ನು ಹೈಟಿಯ ಸಮಂದಾಗ್ ಪ್ರಾಂತ್ಯದಲ್ಲಿ ಅದರ ಕೇಂದ್ರ ಬಿಂದುವಿನೊಂದಿಗೆ ಮೂರು ನಿಮಿಷಗಳ ನಂತರ 5.8 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದ್ದು, ಮೊದಲ ಭೂಕಂಪವು 16.7 ಕಿಮೀ (10.4 ಮೈಲಿ) ಆಳದಲ್ಲಿ ಸಂಭವಿಸಿದರೆ, ಎರಡನೆಯದು 7 ಕಿಮೀ (4.3 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಭೂಕಂಪನ ಮಾಪನ ಇಲಾಖೆ ಮಾಹಿತಿ ನೀಡಿದೆ. ವರದಿಯ ಪ್ರಕಾರ ಫೆಬ್ರವರಿ 6 ರಂದು ಸಂಭವಿಸಿದ್ದ ಭೂಕಂಪದ ಕೇಂದ್ರಬಿಂದುವು ಹೈಟಿಯಿಂದ 100 ಕಿಮೀ ಅಥವಾ ಅದಕ್ಕಿಂತ ಹೆಚ್ಚು ದೂರದಲ್ಲಿರುವ ಕಹನ್‌ಮರಸ್‌ನಲ್ಲಿತ್ತು. ಸೋಮವಾರ ತಡರಾತ್ರಿ ಸಂಭವಿಸಿದ ಭೂಕಂಪದ ಪರಿಣಾಮ ಸಿರಿಯಾ, ಜೋರ್ಡಾನ್, ಇಸ್ರೇಲ್ ಮತ್ತು ಈಜಿಪ್ಟ್‌ನಲ್ಲಿಯೂ ಕಂಡುಬಂದಿದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಟರ್ಕಿಯಲ್ಲಿ ಭೀಕರ ಭೂಕಂಪ: ಮೃತಪಟ್ಟವರ ಸಂಖ್ಯೆ 40 ಸಾವಿರಕ್ಕೆ ಏರಿಕೆ, ಮುಂದುವರಿದ ರಕ್ಷಣಾ ಕಾರ್ಯ
ಸುನಾಮಿ ಭೀತಿ?
ಭೂಕಂಪದ ನಂತರ ಸಮುದ್ರದಲ್ಲಿ ಅಲೆಗಳು 50 ಸೆಂ.ಮೀ ವರೆಗೆ ಹೆಚ್ಚಾಗಬಹುದು ಎಂದು ಟರ್ಕಿಯ ವಿಪತ್ತು ನಿರ್ವಹಣಾ ಸಂಸ್ಥೆ ಎಚ್ಚರಿಸಿದೆ. ಮುಂಜಾಗ್ರತಾ ಕ್ರಮವಾಗಿ ಕರಾವಳಿ ಪ್ರದೇಶಗಳಿಗೆ ತೆರಳದಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ. ಟರ್ಕಿಯ ಉಪಾಧ್ಯಕ್ಷರು ಹಾನಿಗೊಳಗಾದ ಕಟ್ಟಡಗಳಿಂದ ದೂರವಿರಲು ಪ್ರದೇಶದ ನಾಗರಿಕರಿಗೆ ಕರೆ ನೀಡಿದರು. ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸುತ್ತಿದ್ದಾರೆ. (KANNAD PRABHA)