A part of Indiaonline network empowering local businesses

ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಪ್ರತಿಭಟನೆ: ಮಹಿಳಾ ಕುಸ್ತಿಪಟುಗಳಿಗೆ ನೀರಜ್ ಚೋಪ್ರಾ ಬೆಂಬಲ

News

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಶುಕ್ರವಾರ ತಮ್ಮ ಬೆಂಬಲ ಸೂಚಿಸಿದ್ದಾರೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್(ಐಒಎ) ಅಧ್ಯಕ್ಷೆ ಪಿಟಿ ಉಷಾ ಅವರು ಕುಸ್ತಿಪಟುಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಒಂದು ದಿನದ ನಂತರ ಚೋಪ್ರಾ ಅವರು ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದು, ಅಥ್ಲೀಟ್‌ಗಳಿಗೆ ನ್ಯಾಯ ಒದಗಿಸಲು ಅಧಿಕಾರಿಗಳು "ತ್ವರಿತ ಕ್ರಮ" ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನು ಓದಿ: 2014ರಿಂದಲೇ ಡಬ್ಲ್ಯುಎಫ್‌ಐ ಅಧ್ಯಕ್ಷರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಫಿಸಿಯೋಥೆರಪಿಸ್ಟ್

ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಥ್ಲೀಟ್‌ಗಳ ಆಯೋಗಕ್ಕೆ ದೂರು ನೀಡುವ ಬದಲು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪಿಟಿ ಉಷಾ ಆಕ್ರೋಶ ವ್ಯಕ್ತಪಡಿಸಿದ್ದರು.

ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಏಸ್ ಜಾವೆಲಿನ್ ಥ್ರೋವರ್ ಚೋಪ್ರಾ ಅವರು, ನ್ಯಾಯಕ್ಕಾಗಿ ಕುಸ್ತಿಪಟುಗಳು ಬೀದಿಗಿಳಿದಿರುವುದನ್ನು ನೋಡಲು ತುಂಬಾ ನೋವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

"ನಮ್ಮ ಕ್ರೀಡಾಪಟುಗಳು ನ್ಯಾಯಕ್ಕಾಗಿ ಬೀದಿಗಿಳಿದಿರುವುದನ್ನು ನೋಡಿ ನನಗೆ ತುಂಬಾ ನೋವಾಗುತ್ತಿದೆ. ಅವರು ನಮ್ಮ ಶ್ರೇಷ್ಠ ದೇಶವನ್ನು ಪ್ರತಿನಿಧಿಸಿ ನಮಗೆ ಹೆಮ್ಮೆ ತರಲು ಶ್ರಮಿಸಿದ್ದಾರೆ. ರಾಷ್ಟ್ರವಾಗಿ, ಪ್ರತಿಯೊಬ್ಬ ವ್ಯಕ್ತಿ, ಕ್ರೀಡಾಪಟು ಅಥವಾ ಅವರ ಸಮಗ್ರತೆ ಮತ್ತು ಘನತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈಗ ಏನಾಗುತ್ತಿದೆಯೋ ಅದು ಮತ್ತೆ ಎಂದಿಗೂ ಸಂಭವಿಸಬಾರದು. "ಇದು ಸೂಕ್ಷ್ಮ ವಿಷಯವಾಗಿದೆ. ಹೀಗಾಗಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ರೀತಿಯಲ್ಲಿ ವ್ಯವಹರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಚೋಪ್ರಾ ಹೇಳಿದ್ದಾರೆ.
(KANNAD PRABHA)

30 Days ago