A part of Indiaonline network empowering local businesses

ಬಾಯಿ ಹುಣ್ಣಿಗೆ ಮನೆಮದ್ದುಗಳು ಹಾಗೂ ಆಯುರ್ವೇದ ಪರಿಹಾರಗಳು (ಕುಶಲವೇ ಕ್ಷೇಮವೇ)

News

ಬಾಯಿ ಹುಣ್ಣು ಒಂದು ಸಾಮಾನ್ಯ ಸಮಸ್ಯೆ. ಬಾಯಿ ಹುಣ್ಣು ಇದ್ದರೆ ಯಾವುದೇ ಆಹಾರವನ್ನು ತಿನ್ನಲು ಆಗುವುದಿಲ್ಲ. ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ಉಪ್ಪು ಮಸಾಲೆ ಇದ್ದರಂತೂ ಉರಿಯುತ್ತದೆ. ಆಹಾರವನ್ನು ಜಗಿಯಲೂ ಕಷ್ಟವಾಗುತ್ತದೆ, ಅಲ್ಲದೆ ಮಾತನಾಡಲೂ ಕಷ್ಟವಾಗುತ್ತದೆ. ಕೆಲವರಿಗೆ ಈ ಸಮಸ್ಯೆ ಕೆಲವರಿಗೆ ಪದೇ ಪದೇ ಕಾಡುತ್ತಿದ್ದರೆ ಮತ್ತೆ ಕೆಲವರಿಗೆ ಎರಡು-ಮೂರು ತಿಂಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ.

ಬಾಯಿಯ ಹುಣ್ಣು ಏಕೆ ಬರುತ್ತದೆ?

ಬಾಯಿ ಹುಣ್ಣಿಗೆ ನಿರ್ದಿಷ್ಟ ಕಾರಣ ಏನೂ ಎಂಬುದು ಇನ್ನೂ ಸರಿಯಾಗಿ ತಿಳಿದಿಲ್ಲ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಮತ್ತು ಬಾಯಿ ಹುಣ್ಣುಗಳು ಉಂಟಾಗಲು ವಿವಿಧ ಕಾರಣಗಳು ಇರುತ್ತವೆ. ಇದು ಸಾಮಾನ್ಯವಾಗಿ ಹಾರ್ಮೋನುಗಳ ಅಸಮತೋಲನ, ಆಮ್ಲೀಯತೆ, ಮಲಬದ್ಧತೆ, ವಿಟಮಿನ್ ಬಿ ಮತ್ತು ಸಿ ಕೊರತೆ, ಜೊತೆಗೆ ಕಬ್ಬಿಣ ಮತ್ತು ಇತರ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಬಾಯಿ ಹುಣ್ಣು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ಕರುಳು ಸಂಬಂಧಿತ ಸಮಸ್ಯೆಗಳಿಗೆ ರಾಮಬಾಣ; ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ನೈಸರ್ಗಿಕ ಔಷಧಿ

ಕೆಲವರಿಗೆ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಬಾಯಿಯನ್ನು ಸ್ವಚ್ಛವಾಗಿ, ಸರಿಯಾಗಿ ಇಟ್ಟುಕೊಳ್ಳದಿದ್ದರೂ ಕೂಡ ಈ ಸಮಸ್ಯೆ ಉಂಟಾಗಬಹುದು. ಕೆಲವರಿಗೆ ಒತ್ತಡ, ನಿದ್ರೆಯ ಕೊರತೆ ಅಥವಾ ಹಾರ್ಮೋನುಗಳ ಬದಲಾವಣೆಯಿಂದಲೂ ಬಾಯಿ ಹುಣ್ಣು ಉಂಟಾಗಬಹುದು. ಒಟ್ಟಿನಲ್ಲಿ ಹೇಳುವುದಾದರೆ ಎಲ್ಲರೂ ಒಮ್ಮೆಯಾದರೂ ಬಾಯಿ ಹುಣ್ಣಿನ ಸಮಸ್ಯೆಯನ್ನು ಎದುರಿಸಿರುತ್ತಾರೆ. ಆದ್ದರಿಂದಲೇ ಇದೊಂದು ಸಾಮಾನ್ಯ ಸಮಸ್ಯೆ ಎನಿಸಿದೆ.

ಬಾಯಿ ಹುಣ್ಣು ಆದಾಗ ಏನು ಮಾಡಬೇಕು?

ಬಾಯಿಯ ಹುಣ್ಣುಗಳು ಒಸಡುಗಳ ಕೆಳಭಾಗದಲ್ಲಿ ಮತ್ತು ಬಾಯಿಯ ಇತರ ಸ್ಥಳಗಳಲ್ಲಿ ಕಂಡುಬರುವ ಸಣ್ಣ ಸಣ್ಣ ಗಾಯಗಳಾಗಿವೆ. ಬಾಯಿ ಹುಣ್ಣು ಸಾಮಾನ್ಯವಾಗಿ ಕೆಂಪು ಅಂಚಿನೊಂದಿಗೆ ಬಿಳಿಯ ಬಣ್ಣದ್ದಾಗಿರುತ್ತದೆ. ಇದು ಸಾಂಕ್ರಾಮಿಕವಲ್ಲ ಮತ್ತು ಸೂಕ್ತವಾದ ಕ್ರಮ ಕೈಗೊಂಡಲ್ಲಿ ಕೆಲವೇ ದಿನಗಳಲ್ಲಿ ಅಥವಾ ಒಂದೆರಡು ವಾರಗಳಲ್ಲಿ ವಾಸಿಯಾಗುತ್ತವೆ. ದೀರ್ಘಕಾಲದವರೆಗೆ ಬಾಯಿಯಲ್ಲಿ ಹುಣ್ಣು ಮತ್ತು ನೋವಿನ ಹುಣ್ಣುಗಳು ಗಂಭೀರವಾದ ವೈದ್ಯಕೀಯ ಸಮಸ್ಯೆಯ ಸಂಕೇತವಾಗಬಹುದು. ಉದಾಹರಣೆಗೆ ಸಣ್ಣ ಅಥವಾ ದೊಡ್ಡ ಕರುಳಿನ ಸೋಂಕುಗಳು, ಅಸಮರ್ಪಕ ಜೀರ್ಣಕ್ರಿಯೆ, ತೀವ್ರ ಆಮ್ಲೀಯತೆಯ ಇಂತಹ ಸಮಸ್ಯೆಗಳು ಇರಬಹುದು. ಆದ್ದರಿಂದ ಹೆಚ್ಚು ಕಾಲ ಬಾಯಿ ಹುಣ್ಣು ನೋವು ಕೊಡುತ್ತಿದ್ದು ದೀರ್ಘಕಾಲದವರೆಗೆ ಇದ್ದರೆ ವೈದ್ಯರನ್ನು ತಡಮಾಡದೇ ಕಾಣಬೇಕು.

ಬಾಯಿ ಹುಣ್ಣಿಗೆ ಮನೆಮದ್ದುಗಳು

ಬಾಯಿ ಹುಣ್ಣಿನ ನೋವಿನ ತಕ್ಷಣ ಕಡಿಮೆಯಾಗಲು ಸ್ವಚ್ಛವಾದ ಹತ್ತಿಯನ್ನು ಜೀನುತುಪ್ಪಕ್ಕೆ ಅದ್ದಿ ನೋವಿರುವ ಭಾಗಕ್ಕೆ ಇಟ್ಟುಕೊಳ್ಳಬೇಕು.ಹೀಗೆಯೇ ತುಪ್ಪವನ್ನು ಬಾಯಿ ಹುಣ್ಣಿಗೆ ಹಚ್ಚಿಕೊಂಡರೂ ನೋವು ಉಪಶಮನವಾಗುತ್ತದೆ. ತೆಂಗಿನ ಎಣ್ಣೆಯನ್ನು ಬಾಯಿ ಹುಣ್ಣಿಗೆ ಹಚ್ಚಿಕೊಂಡರೆ ನೋವು ಬೇಗ ತಣಿಯುತ್ತದೆ. ಹಾಗೆಯೇ ಸ್ವಲ್ಪ ಅಲೋವೆರಾದ ತಾಜಾ ತಿರುಳನ್ನು (ಲೋಳೆಸರ) ಹುಣ್ಣಿನ ಮೇಲೆ ದಿನವೂ ಹಚ್ಚುತ್ತಿದ್ದರೆ ಒಂದೆರಡು ದಿನಗಳಲ್ಲಿ ವಾಸಿವಾಗಬಹುದು. ಅಲೋವೆರಾ ಕೂಡ ದೇಹವನ್ನು ತಂಪಾಗಿರಿಸಲು ಸಹಕಾರಿ.

ಇದನ್ನೂ ಓದಿ: ಬಿಳಿ ಮುಟ್ಟು ಅಥವಾ White Discharge

ಬಾಯಿ ಹುಣ್ಣು ಆದಾಗ ಎಳನೀರು ಕುಡಿದರೆ ಬಹಳ ಒಳ್ಳೆಯದು. ದಿನಕ್ಕೆ ಎರಡು ಅಥವಾ ಮೂರು ಸಲ ತಾಜಾ ಮಜ್ಜಿಗೆಯನ್ನೂ ತೆಗೆದುಕೊಳ್ಳಬಹುದು. ಇದರಿಂದ ದೇಹದ ತಾಪಮಾನ ಕಡಿಮೆಯಾಗಿ ಬಾಯಿಯಲ್ಲಿನ ಹುಣ್ಣುಗಳು ವಾಸಿಯಾಗಲು ಸಹಾಯವಾಗುತ್ತದೆ.

ಬಾಯಿ ಹುಣ್ಣಿಗೆ ಆಯುರ್ವೇದ ಪರಿಹಾರಗಳು

ಹಲವಾರು ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುವ ಗುಣಲಕ್ಷಣಗಳನ್ನು ಹೊಂದಿರುವ ಅರಿಶಿನದಲ್ಲಿಯೂ ಕೂಡ ಬಾಯಿ ಹುಣ್ಣಿನ ಸಮಸ್ಯೆಯ ವಿರುದ್ಧ ಹೋರಾಡುವ ಗುಣವಿದೆ. ಒಂದು ಟೇಬಲ್ ಚಮಚ ಜೇನುತುಪ್ಪ, ಅರ್ಧ ಟೀ ಚಮಚ ಅರಿಶಿನವನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ಬಾಯಿ ಹುಣ್ಣಿರುವ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚಬೇಕು. ನಾಲ್ಕೈದು ದಿನಗಳ ಪ್ರತಿದಿನ ಹೀಗೆ ಮಾಡುತ್ತಾ ಬರುವುದರಿಂದ ಕೂಡಲೇ ಈ ಸಮಸ್ಯೆ ವಾಸಿಯಾಗುತ್ತದೆ.

ಪ್ರತಿದಿನ ತುಳಸಿ ಗಿಡದ ಎಲೆಗಳನ್ನು ಚೆನ್ನಾಗಿ ಜಗಿದು ಅದರ ರಸವನ್ನು ಹೀರಬೇಕು. ತುಳಸಿ ಎಲೆಗಳ ಚಹಾ ತಯಾರು ಮಾಡಿಕೊಂಡು ದಿನದಲ್ಲಿ ಎರಡು ಬಾರಿಯಾದರೂ ಕುಡಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಒಂದು ಚಮಚ ನೆಲ್ಲಿಕಾಯಿ ಪುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.

ಇದನ್ನೂ ಓದಿ: ಹುಳುಕು ಹಲ್ಲು ಉಂಟಾಗಲು ಕಾರಣಗಳೇನು? ಚಿಕಿತ್ಸೆ ಹೇಗೆ? (ಕುಶಲವೇ ಕ್ಷೇಮವೇ)

ಬಾಯಿ ಹುಣ್ಣು ಆದಾಗ ಆಮ್ಲೀಯ ಹಣ್ಣುಗಳಾದ ನಿಂಬೆ, ಕಿತ್ತಳೆ, ಅನಾನಸ್, ಚಿಪ್ಸ್ ಮತ್ತು ಮಸಾಲೆಯುಕ್ತ ಆಹಾರ ಸೇವಿಸಬಾರದು. ನಿಧಾನವಾಗಿ ಮೆದುವಾಗಿರುವ ಬ್ರಿಸಲ್ಲುಗಳಿರುವ ಬ್ರಶ್ ಉಪಯೋಗಿಸಿ ಹಲ್ಲು ಉಜ್ಜಬೇಕು. ಯಾವುದೇ ರೀತಿಯ ಮಾನಸಿಕ ಒತ್ತಡ ಇದ್ದರೆ ಧ್ಯಾನ ಮಾಡಲು ಪ್ರಯತ್ನಿಸಿ. ಒತ್ತಡವನ್ನು ನಿವಾರಿಸಲು ನೀವು ಮಾಡಲು ಇಷ್ಟಪಡುವ ಯಾವುದೇ ಚಟುವಟಿಕೆಯನ್ನು ತೊಡಗಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಎಂಟು ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಬೇಕು. ಸಾಕಷ್ಟು ನೀರು ಕುಡಿಯುವುದು ಬಾಯಿ ಹುಣ್ಣುಗಳ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪೋಷಕಾಂಶಗಳು ಇರುವಂತಹ ಸಮತೋಲಿತ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಬಾಯಿಯ ಹುಣ್ಣು ಕಡಿಮೆ ಆಗುವುದು. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ನಿಯಮಿತವಾಗಿ ಸೇರಿಸಿಕೊಳ್ಳಬೇಕು. ಆಲ್ಕೋಹಾಲ್, ಕಾಫಿ ಮತ್ತು ತಂಪು ಪಾನೀಯಗಳ ಸೇವನೆ ಹೆಚ್ಚು ಬೇಡ. ಹಾಗೆಯೇ ಅತಿ ಮಸಾಲೆಯುಕ್ತ ಪದಾರ್ಥಗಳ ಸೇವನೆ ಸಲ್ಲ. ಪ್ರತಿದಿನ ಮೂರು ಲೀಟರ್ ನೀರನ್ನು ಕುಡಿಯಬೇಕು. ಹೀಗೆ ಮಾಡಿದರೆ ಬಾಯಿಯ ಹುಣ್ಣು ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ. (KANNAD PRABHA)

386 Days ago