ಬೆಂಗಳೂರು: 2018ರಲ್ಲಿ ಬಹುತೇಕ ಲಿಂಗಾಯತ ಮತಗಳನ್ನು ಪಡೆದಿದ್ದ ಬಿಜೆಪಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಅದೇ ಮ್ಯಾಜಿಕ್ ನಿರೀಕ್ಷಿಸುವಂತಿಲ್ಲ, ಸದ್ಯ ನಡೆಯುತ್ತಿರುವ ಬದಲಾವಣೆ ಕೇಸರಿ ಪಕ್ಷದ ನಾಯಕರನ್ನು ಆತಂಕಕ್ಕೀಡು ಮಾಡಿದೆ.
ಬಿಜೆಪಿ ವಿರುದ್ಧ ಬಹಿರಂಗವಾಗಿ ಕೆಲಸ ಮಾಡುತ್ತಿರುವ ಜಾಗತಿಕ ಲಿಂಗಾಯತ ಚಳುವಳಿ, ಪಂಚಮಸಾಲಿ ಗುಂಪುಗಳು ಮತ್ತು ರಾಷ್ಟ್ರೀಯ ಬಸವ ದಳದ ಸದಸ್ಯರು ಈ ಬದಲಾವಣೆಗೆ ಕಾರಣರಾಗಿದ್ದಾರೆ, ಸಮುದಾಯದ ನಿಲುವನ್ನು ಸ್ಪಷ್ಟಪಡಿಸಿದ ಪಂಚಮಸಾಲಿ ಮಠಾಧೀಶ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ನಮ್ಮ ಕೋಪ ಕೇವಲ ಮೀಸಲಾತಿ ವಿಷಯದ ಮೇಲಿದೆ.
ಎರಡು ವರ್ಷ ಕಳೆದರೂ ಬಿಜೆಪಿ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ನಾವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 65 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ನಮ್ಮೊಂದಿಗೆ ಮಾತನಾಡಲು ಸರ್ಕಾರಕ್ಕೆ ಸಮಯವಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಂದು ನಮ್ಮನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ಸುಮ್ಮನಿದ್ದಾರೆ ಅಂದರೆ ದೌರ್ಬಲ್ಯ ಅಂದುಕೊಳ್ಳಬೇಡಿ: ಸಿಟಿ ರವಿಗೆ ವಿಜಯೇಂದ್ರ ಎಚ್ಚರಿಕೆ
ಪಂಚಮಸಾಲಿಗಳು ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಬಿಜೆಪಿಗೆ ಈ ಬಾರಿ ಲಿಂಗಾಯತ ಸಮುದಾಯ ಬೆಂಬಲ ನೀಡುವಲ್ಲಿ ದೊಡ್ಡ ತೊಡಕುಗಳಿವೆ ಎಂದು ಲಿಂಗಾಯತ ಚಳವಳಿಗಳೊಂದಿಗೆ ಗುರುತಿಸಿಕೊಂಡಿರುವ ಮಾಜಿ ಅಧಿಕಾರಿ ಎಸ್‌ಎಂ ಜಾಮದಾರ್ ಹೇಳಿದ್ದಾರೆ.
‘ಲಿಂಗಾಯತರು ಸಾಮಾನ್ಯವಾಗಿ ಸಮುದಾಯದ ಪರವಾಗಿ ನಿಲ್ಲುವವರನ್ನು ಬೆಂಬಲಿಸುತ್ತಾರೆ. ಆದರೆ ಈ ಬಾರಿ, ಯಡಿಯೂರಪ್ಪ ಅವರು ಸಿಎಂ ಆಗಿ ನಿರ್ಗಮಿಸಿದ ನಂತರ, ವಿಶೇಷವಾಗಿ ಅವರು ಕಣ್ಣೀರು ಸುರಿಸಿದ ನಂತರ ಅದು ತಣ್ಣಗಾದಂತಿದೆ ಎಂದು ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ತಿಳಿಸಿದ್ದಾರೆ.
ನಮ್ಮನ್ನು ವಿರೋಧಿಸುವವರು ಮೂಲತಃ ಕಾಂಗ್ರೆಸ್ ಪರ ಶಕ್ತಿಗಳಾಗಿದ್ದು, ಬಿಜೆಪಿಯಿಂದ ದೂರ ಸರಿಯುತ್ತಿಲ್ಲ. ಲಿಂಗಾಯತರು ಇತರರನ್ನು ನಂಬುವುದಿಲ್ಲವಾದ್ದರಿಂದ ಅವರು ನಮ್ಮನ್ನು ಬೆಂಬಲಿಸುವುದನ್ನು ಮುಂದುವರಿಸುತ್ತಾರೆ ಎಂದು ಬಿಜೆಪಿಯ ಮಾಜಿ ಎಂಎಲ್‌ಸಿ ಗೋ ಮಧುಸೂದನ್ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆಗೆ ದಿನಗಣನೆ: ಕರ್ನಾಟಕದಲ್ಲಿ ಮತದಾರರ ಮೇಲೆ ಉಡುಗೊರೆಗಳ ಸುರಿಮಳೆ!
ಲಿಂಗಾಯತ ಸಮುದಾಯ ಬೆಂಬಲ ಕಡಿಮೆಯಾಗುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಪಂಚಮಸಾಲಿ ಉಪಪಂಗಡ ಸೇರಿದಂತೆ ಹಲವು ಸ್ವಯಂಸೇವಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅವರ ಮನ ಗೆಲ್ಲದಿದ್ದರೇ ಬಿಜೆಪಿ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ವಿವರಿಸಿದ್ದಾರೆ. (KANNAD PRABHA)