A part of Indiaonline network empowering local businesses

ಬೆಂಗಳೂರು: ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಮೊಬೈಲ್ ಹುಡುಕಲು ಹೋದವರಿಗೆ ಸಿಕ್ತು ಕಾಂಡೋಮ್, ಗರ್ಭನಿರೋಧಕ ಮಾತ್ರೆ

News

ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌ಗಳು, ಲೈಟರ್‌, ಸಿಗರೇಟ್‌ಗಳು, ವೈಟ್‌ನರ್‌ಗಳು ಮತ್ತು ಗರ್ಭನಿರೋಧಕ ಮಾತ್ರೆ(ಐ-ಪಿಲ್), ನೀರಿನ ಬಾಟಲಿಗಳಲ್ಲಿ ಆಲ್ಕೋಹಾಲ್ ಇರುವುದೂ ಪತ್ತೆಯಾಗಿರುವ ಆಘಾತಕಾರಿ ಸಂಗತಿ ಹೊರಬಿದ್ದಿದೆ.

ಮಕ್ಕಳ ಏಕಾಗ್ರತೆ ಮತ್ತು ಕಲಿಕೆಗೆ ಸ್ಮಾರ್ಟ್​ಫೋನ್​ಗಳಿಂದ ಭಂಗ ಬರುತ್ತಿದೆ. ಇದೇ ಕಾರಣಕ್ಕೆ ಶಾಲೆಗಳಿಗೆ ಸ್ಮಾರ್ಟ್​ಫೋನ್ ತರುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಹಲವು ಶಾಲೆಗಳು ವಿದ್ಯಾರ್ಥಿಗಳು ಮಕ್ಕಳ ಬ್ಯಾಗ್​ಗಳನ್ನು ತಪಾಸಣೆಗೆ ಒಳಪಡಿಸುತ್ತಿವೆ.

 ಈ ವೇಳೆ ಕೆಲ ಮಕ್ಕಳ ಬ್ಯಾಗ್​ಗಳಲ್ಲಿ ಸೆಲ್​ಫೋನ್​ಗಳು, ಸ್ಮಾರ್ಟ್​ಫೋನ್​ಗಳು, ಜೊತೆಗೆ ಕಾಂಡೋಮ್​ಗಳು, ಗರ್ಭನಿರೋಧಕ ಮಾತ್ರೆಗಳು, ಲೈಟರ್​ಗಳು, ಸಿಗರೇಟ್​ಗಳು, ಮತ್ತೇರಿಸುವ ವಾಸನೆ ಹೊಂದಿರುವ ವೈಟ್​ನರ್​ಗಳು ಮತ್ತು ಹೆಚ್ಚಿನ ಮೊತ್ತದ ನಗದು ಪತ್ತೆಯಾಗಿವೆ. ಈ ಬೆಳವಣಿಗೆಯು ಹಲವು ಶಾಲೆಗಳ ಬೋಧಕ ಸಿಬ್ಬಂದಿಯಲ್ಲಿ ಆಘಾತ ಉಂಟು ಮಾಡಿದೆ. ‘ಮಕ್ಕಳು ದಾರಿ ತಪ್ಪುತ್ತಿದ್ದಾರೆಯೇ? ಇಂಥ ಮಕ್ಕಳನ್ನು ನಿಭಾಯಿಸುವುದು ಹೇಗೆ’ ಎಂಬ ಗೊಂದಲ ಅವರನ್ನು ಕಾಡುತ್ತಿದೆ.

ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ಕೂಡ ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು. ಕೆಲವು ಶಾಲೆಗಳು ಪೋಷಕ- ಶಿಕ್ಷಕರ ವಿಶೇಷ ಸಭೆಗಳನ್ನು ನಡೆಸುತ್ತಿವೆ.

ನಾವು ಈ ವಿಷಯದ ಬಗ್ಗೆ ಪೋಷಕರ ಜೊತೆ ಚರ್ಚೆ ನಡೆಸಿದ್ದೇವೆ. ಇದನ್ನು ಕೇಳಿಯೇ ಅವರು ಆಘಾತಕ್ಕೆ ಒಳಗಾದರು. ತಮ್ಮ ಮಕ್ಕಳ ವರ್ತನೆ ಯಲ್ಲಿ ಇದ್ದಕ್ಕಿದ್ದಂತೆ ಆಗಿರುವ ಬದ ಲಾವಣೆಗಳ ಬಗ್ಗೆಯೂ ಕೆಲವು ಪೋಷಕರು ಹೇಳಿಕೊಂಡಿದ್ದಾರೆ’ ಎಂದು ನಾಗರಬಾವಿಯಲ್ಲಿರುವ ಶಾಲೆ ಯೊಂದರ ಪ್ರಾಂಶುಪಾಲರು ಹೇಳಿದರು.

ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಲು ಮುಂದಾಗಿರುವ ಕೆಲವು ಶಾಲೆಗಳು, ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ಬದಲು ಅವರಿಗೆ ಕೌನ್ಸೆಲಿಂಗ್ ಕೊಡಿಸುವಂತೆ ಪೋಷಕರಿಗೆ ಸಲಹೆ ನೀಡಿವೆ.‌

‘ನಮ್ಮ ಶಾಲೆಗಳಲ್ಲಿ ನಿಯಮಿತ ಕೌನ್ಸೆಲಿಂಗ್ ಅವಧಿ ಇದ್ದರೂ, ಮಕ್ಕಳಿಗೆ ಹೊರಗಿನಿಂದ ಆಪ್ತ ಸಮಾಲೋಚನೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಪೋಷಕ ರಿಗೆ ತಿಳಿಸಿದ್ದೇವೆ. ಅದಕ್ಕಾಗಿ ಒಂದು ವಾರದಿಂದ 10 ದಿನಗಳವರೆಗೆ ರಜೆಯನ್ನೂ ನೀಡಿದ್ದೇವೆ’ ಎಂದೂ ಪ್ರಾಂಶುಪಾಲರು ಹೇಳಿದರು.

10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್‌ನಲ್ಲಿ ಕಾಂಡೋಮ್ ಸಿಕ್ಕಿದೆ. ಇದು ಹೇಗೆ ಬಂತು? ಅಂತ ಶಿಕ್ಷಕರು ಕೇಳಿದಾಗ, “ಇದು ನನ್ನದಲ್ಲ, ಫ್ರೆಂಡ್‌ದು” ಎಂದು ಕುಂಟು ನೆಪ ಹೇಳಿದ್ದಾಳೆ. ಈ ವಿಷಯವನ್ನು ಕಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ದೃಢಪಡಿಸಿದ್ದಾರೆ.  (KANNAD PRABHA)

299 Days ago