A part of Indiaonline network empowering local businesses Chaitra Navratri

ಬೇಸಿಗೆಯಲ್ಲಿ ಬೆವರುಗುಳ್ಳೆ ಸಮಸ್ಯೆ (ಕುಶಲವೇ ಕ್ಷೇಮವೇ)

News

ಬೇಸಿಗೆ ಕಾಲ ಶುರುವಾಯಿತೆಂದರೆ ಸಾಕು ಬೆವರು ಮತ್ತು ಬೆವರುಗುಳ್ಳೆಯ ಸಮಸ್ಯೆಗಳು ಸಾಮಾನ್ಯ. ಆದ್ದರಿಂದ ಬೇಸಿಗೆ ಕಾಲದಲ್ಲಿ ಚರ್ಮದ ಆರೈಕೆ ಹೆಚ್ಚು ಗಮನ ನೀಡಬೇಕು. ಸರಿಯಾದ ಆರೈಕೆಯಿಂದ ಮಾತ್ರ ನಾವು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. 

ಬೆವರುಗುಳ್ಳೆ ಏಕೆ ಬರುತ್ತದೆ?
ಬೇಸಿಗೆಯಲ್ಲಿ ಸೂರ್ಯನ ಬಿರುಬಿಸಿಲಿನ ಕಾರಣದಿಂದ ದೇಹ ಸಾಕಷ್ಟು ಬೆವರುತ್ತದೆ. ಬೆವರಿನಲ್ಲಿ ಹಲವಾರು ಸೂಕ್ಷ್ಮ ಬ್ಯಾಕ್ಟೀರಿಯಾಗಳಿರುತ್ತವೆ. ಪ್ರತಿದಿನ ದೇಹವನ್ನು ಚೆನ್ನಾಗಿ ಶುಚಿಗೊಳಿಸದಿದ್ದರೆ ಬೆವರುಗುಳ್ಳೆಗಳುಂಟಾಗಿ ಸಮಸ್ಯೆಯಾಗುತ್ತದೆ. ಬೆವರುಗುಳ್ಳೆಗಳು ತುರಿಕೆ ಮತ್ತು ಉರಿಯನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ಕೆಂಪಗೆ ಕಾಣಿಸಿಕೊಂಡು ತೊಂದರೆ ಕೊಡುತ್ತವೆ. 
ಬೆವರುಗುಳ್ಳೆಗಳು ಕುತ್ತಿಗೆ, ಹೊಟ್ಟೆ, ಬೆನ್ನು, ಮುಖ ಮತ್ತು ತೊಡೆಯಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಬೆವರಿನ ದುರ್ಗಂಧವೂ ಕಾಡುತ್ತದೆ. ಆದ್ದರಿಂದ ಬೆವರಿನ ವಾಸನೆಯಿಂದ ಪಾರಾಗಲು ಪ್ರತಿನಿತ್ಯ ತಣ್ಣೀರಿನಿಂದ ಸ್ನಾನ ಮಾಡುವುದು ಅತಿ ಮುಖ್ಯವಾದುದು. ಸ್ನಾನ ಮಾಡುವುದರಿಂದ ದೇಹದ ದುರ್ಗಂಧವು ನಾಶವಾಗುತ್ತದೆ ಮತ್ತು ಪ್ರತಿದಿನ ತಾಜಾತನದ ಹುಮ್ಮಸ್ಸು ನಮ್ಮದಾಗುತ್ತದೆ. ಮೈಯಲ್ಲಿ ಬೆವರು ನಿಲ್ಲುವುದು ತಪ್ಪುತ್ತದೆ. ಜೊತೆಗೆ ಬೆವರುಗುಳ್ಳೆಗಳು ಬರುವುದಿಲ್ಲ.

ಇದನ್ನೂ ಓದಿ: H3N2 ಇನ್‌ಫ್ಲುಯೆಂಜಾ: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)

ಬೆವರುಗುಳ್ಳೆ ಬರದಿರಲು ಏನು ಮಾಡಬೇಕು?
ಕೆಲವು ಪ್ರದೇಶಗಳಲ್ಲಿ ನೀರಿನ ಅಭಾವ ಇರುತ್ತದೆ. ಅಂತಹ ಪ್ರದೇಶಗಳಲ್ಲಿ ವಾಸಿಸುವ ಜನರು ಬಟ್ಟೆಯನ್ನು ತಣ್ಣೀರಿನಲ್ಲಿ ಮೈಯನ್ನು ಆಗಾಗ ಒರೆಸಿಕೊಳ್ಳಬೆಕು. ನೀರಿಗೆ ಸ್ವಲ್ಪ ಕರ್ಪೂರ ಹಾಕಿ ಸ್ನಾನ ಮಾಡಬೇಕು. ಮೈಗೆ ಬೇವಿನೆಲೆಯನ್ನು ಅರೆದು ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡಬೇಕು. 

ಬೆವರುಗುಳ್ಳೆ ನಿವಾರಣೆಗೆ ಮನೆಮದ್ದು
ಹಾಲಿನಲ್ಲಿ ಅರಿಶಿನ ಬೆರೆಸಿ ಮೈಗೆ ಲೇಪಿಸಿ ಒಂದು ಗಂಟೆಯ ನಂತರ ಸ್ನಾನ ಮಾಡುವುದರಿಂದ ಗುಳ್ಳೆಗಳು ವಾಸಿ ಆಗುವುದಲ್ಲದೆ ಚರ್ಮಕ್ಕೆ ಕಾಂತಿಯುಂಟಾಗುತ್ತದೆ.
ಕೆಲವರಲ್ಲಿ ಅತಿಯಾದ ಬೆವರಿನ ಸಮಸ್ಯೆ ಕಾಡುತ್ತಿರುತ್ತದೆ. ಅಂತಹವರು ಅಳಲೆಕಾಯಿ, ಬೇವಿನ ಎಲೆ, ಲೋಧ್ರ, ದಾಳಿಂಬೆ ಸಿಪ್ಪೆಗಳನ್ನು ಸೇರಿಸಿ ಪುಡಿ ತಯಾರಿಸಿಟ್ಟುಕೊಳ್ಳಬೇಕು. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಮೈಗೆಲ್ಲ ತೆಳುವಾಗಿ ಲೇಪಿಸಿಕೊಂಡು ಒಂದು ಗಂಟೆಯ ನಂತರ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಬೆವರು ಕಡಿಮೆಯಾಗುತ್ತದೆ ಮತ್ತು ಬೆವರಿನಿಂದ ಬರುವ ಕೆಟ್ಟ ವಾಸನೆ ದೂರವಾಗುತ್ತದೆ.

ಇದನ್ನೂ ಓದಿ: ಪಾದಗಳ ಬಿರುಕು: ಆರೈಕೆ ಮತ್ತು ಮನೆಮದ್ದು (ಕುಶಲವೇ ಕ್ಷೇಮವೇ)

ಬೆವರುಗುಳ್ಳೆ ತಡೆಯಲು ಚರ್ಮದ ಆರೈಕೆಯೂ ಬೇಕು
ಪ್ರತಿದಿನ ಸ್ನಾನದ ನಂತರ ಕೇವಲ ಮುಖಕ್ಕೆ ಮಾತ್ರವಲ್ಲ ದೇಹಕ್ಕೂ ಕೂಡ ಮಾಯಿಶ್ಚರೈಸರ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ಉತ್ತಮ ಮಾಯಿಶ್ಚರ್ ಕ್ರೀಮಿನಿಂದ ಚರ್ಮಕ್ಕೆ ಅವಶ್ಯಕವಾಗಿ ಬೇಕಾದ ತೇವಾಂಶ ದೊರೆಯುತ್ತದೆ. ಇದರಿಂದ ಚರ್ಮ ಒಣಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮಾಯಿಶ್ಚರೈಸರ್ ಬೆವರುಗುಳ್ಳೆಗಳನ್ನು ತಡೆಯುತ್ತದೆ. ಹಾಗೆಯೇ ಸ್ನಾನದ ನಂತರ ಮೈಯ್ಯನ್ನು ಚೆನ್ನಾಗಿ ಒರೆಸಿಕೊಂಡು ಕೆಂಪುಚಂದನ ಮತ್ತು ಬೇವಿನ ಪುಡಿಯನ್ನು ಬೆರೆಸಿ ಕುತ್ತಿಗೆ, ಮೈ, ಕಂಕುಳು, ಬೆನ್ನು ಮತ್ತು ತೊಡೆಗಳಿಗೆ ಸಿಂಪಡಿಸಿಕೊಳ್ಳಬೇಕು.

ಚರ್ಮದ ಸಮಸ್ಯೆಗಳಿಗೆ ಮನೆಮದ್ದು
ಎಲ್ಲಾ ಬಗೆಯ ಚರ್ಮದ ಸಮಸ್ಯೆಗಳಿಗೆ ಅಲೋವೆರಾ ಅಂದರೆ ಲೋಳೆಸರ ಮದ್ದು. ಅಲೋವೆರಾದಲ್ಲಿರುವ ಚರ್ಮಸ್ನೇಹಿ ಗುಣಗಳು ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸುತ್ತವೆ. ಉರಿಯೂತ ಮತ್ತು ನಂಜುನಿರೋಧಕವಾಗಿರುವ ಅಲೋವೆರಾ ಚರ್ಮವನ್ನು ತಂಪಾಗಿಸುತ್ತದೆ. ತಾಜಾ ಅಲೋವೆರಾಗೆ ಅರ್ಧ ಚಮಚ ಅರಿಶಿಣವನ್ನು ಬೆರೆಸಿ ಬೆವರುಗುಳ್ಳೆಗಳಿಗೆ ನಿಯಮಿತವಾಗಿ ಹಚ್ಚಿದರೆ ಅವು ಕ್ರಮೇಣ ಕಡಿಮೆಯಾಗುತ್ತವೆ.
ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಶತಶತಮಾನಗಳಿಂದಲೂ ಶ್ರೀಗಂಧವನ್ನು ಬಳಸಲಾಗುತ್ತಿದೆ. ಎರಡು ಚಮಚ ಶುದ್ಧ ಶ್ರೀಗಂಧದ ಪುಡಿಯನ್ನು ನೀರಿನಲ್ಲಿ ಕಲಸಿ ಬೆವರುಗುಳ್ಳೆಗಳಾಗಿರುವ ಜಾಗದಲ್ಲಿ ಹಚ್ಚಿ ಹಾಗೆಯೇ ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆದರೆ ಬೆವರುಗುಳ್ಳೆಗಳಿಂದ ಪರಿಹಾರ ದೊರಕುತ್ತದೆ.

ಇದನ್ನೂ ಓದಿ: ಉಗುರುಸುತ್ತು: ಲಕ್ಷಣಗಳು ಮತ್ತು ಮನೆಮದ್ದು (ಕುಶಲವೇ ಕ್ಷೇಮವೇ)

ಚರ್ಮದ ದದ್ದು
1.ಬೇವು ಹಲವಾರು ಚರ್ಮದ ದದ್ದುಗಳಿಗೆ ಚಿಕಿತ್ಸೆ ನೀಡುತ್ತದೆ. ಇದು ಸೂಕ್ಷ್ಮಾಣುಜೀವಿಗಳು ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಬೇವಿನ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಬೆವರು ಗುಳ್ಳೆಯಾಗಿರುವ ಪ್ರದೇಶಕ್ಕೆ ಹಚ್ಚಿ 30 ನಿಮಿಷಗಳ ನಂತರ ಸ್ನಾನ ಮಾಡಬೇಕು. 

2.ಒಂದು ಟಬ್ ನೀರಿಗೆ 1-2 ಕಪ್ ಓಟ್‌ಮೀಲ್ ಬೆರೆಸಬೇಕು. ಇದರಲ್ಲಿ 10-15 ನಿಮಿಷವಿದ್ದು ಟಬ್‌ಬಾತ್ ಮಾಡಿದರೆ ಶಮನಕಾರಿ. ಇದರಿಂದ ಬೆವರುಗುಳ್ಳೆ ನಿವಾರಣೆಯಾಗುವುದರ ಜೊತೆಗೆ ದೇಹಕ್ಕೂ ಹಿತವಾಗುತ್ತದೆ. 

3.ಎರಡು ಚಮಚ ಹಸಿ ಶುಂಠಿಯ ತುರಿಯನ್ನು ಎರಡು ಕಪ್ ನೀರಿಗೆ ಬೆರೆಸಿ ಕುದಿಸಿ ಸೋಸಬೇಕು. ಆರಿದ ಬಳಿಕ, ಹತ್ತಿ ಉಂಡೆಯನ್ನು ಈ ನೀರಿನಲ್ಲಿ ಅದ್ದಿ ಬೆವರುಗುಳ್ಳೆಗಳಿಗೆ ಲೇಪಿಸಿ 10-15 ನಿಮಿಷಗಳ ಬಳಿಕ ತೊಳೆಯಬೇಕು. ತುಂಬಾ ತುರಿಕೆ ಹಾಗೂ ಬೆವರುಗುಳ್ಳೆಗಳಿದ್ದಾಗ ಹೀಗೆ ಮಾಡಿದರ ಬಹಳ ಉಪಯೋಗವಾಗುತ್ತದೆ. 

4.ಬೇಸಿಗೆಯಲ್ಲಿ ಹಗುರ ಮತ್ತು ಸಡಿಲವಾಗಿರುವ ಹತ್ತಿ ಬಟ್ಟೆಗಳನ್ನು ಧರಿಸುವುದು ಅತ್ಯಗತ್ಯ. ಬಿಗಿಯಾದ ಉಡುಪುಗಳು ಬೇಡ. ಏಕೆಂದರೆ ಹತ್ತಿ ಬಟ್ಟೆಗಳು ಬೆವರನ್ನು ಹೀರಿಕೊಂಡು ಬೆವರುಗುಳ್ಳೆಗಳು ಉಂಟಾಗದಂತೆ ಮಾಡುತ್ತವೆ. ಬಿಸಿಲಿರುವ ಹೊತ್ತಿನಲ್ಲಿ ಹೆಚ್ಚು ತಿರುಗಾಡುವುದು ಬೇಡ. ಹಾಗೆ ಹೊರಹೋಗಬೇಕಾದರೆ ಛತ್ರಿಯನ್ನು ತೆಗೆದುಕೊಂಡು ಹೋಗಬೇಕು. ಇದರಿಂದ ಚರ್ಮದ ರಕ್ಷಣೆ ಸಾಧ್ಯ ಮತ್ತು ಹೆಚ್ಚು ಬೆವರುವುದು ತಪ್ಪುತ್ತದೆ.

ಇದನ್ನೂ ಓದಿ: ಹಿಮ್ಮಡಿ ನೋವು: ಗಂಭೀರ ಸಮಸ್ಯೆಯಲ್ಲ, ಆದರೂ ಅಸಹನೀಯ... (ಕುಶಲವೇ ಕ್ಷೇಮವೇ)

5.ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಸಾಕಷ್ಟು ಅಂದರೆ ದಿನಕ್ಕೆ ಕನಿಷ್ಠ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳಲು ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಸಂಸ್ಕರಿಸಿದ ಆಹಾರಗಳು, ಕರಿದ ಮತ್ತು ಮಸಾಲೆಯುಕ್ತ ಆಹಾರಗಳು, ಕೆಂಪು ಮಾಂಸದ ಆಹಾರಗಳನ್ನು ಹೆಚ್ಚು ತಿನ್ನಬಾರದು. ಕಾಫಿ, ಟೀ ಆದಷ್ಟು ಕಡಿಮೆ ಕುಡಿಯಿರಿ. ತಂಪಾದ ಜ್ಯೂಸ್ ಹೆಚ್ಚು ಸೇವಿಸಿ. (KANNAD PRABHA)

6 Days ago