A part of Indiaonline network empowering local businesses

ಭಕ್ತರ ದರ್ಶನಕ್ಕೆ ತೆರೆದ ಬದರಿನಾಥ ದೇವಾಲಯ, ಮೋದಿ ಹೆಸರಲ್ಲಿ ಮೊದಲ ಪೂಜೆ

News

ಬದರಿನಾಥ: ಉತ್ತರಾಖಂಡದ ಬದರಿನಾಥ ದೇವಾಲಯದ ದ್ವಾರಗಳನ್ನು ಗುರುವಾರ ತೆರೆಯಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೊದಲ ಪೂಜೆ ಮಾಡಲಾಯಿತು ಎಂದು ದೇವಾಲಯದ ಸಮಿತಿ ತಿಳಿಸಿದೆ.

ಇಂದು ಬೆಳಗ್ಗೆ 7:10ಕ್ಕೆ ದೇವಾಲಯದ ಬಾಗಿಲು ತೆರೆಯುವಿಕೆಯನ್ನು ವೀಕ್ಷಿಸಲು ಸಾವಿರಾರು ಯಾತ್ರಾರ್ಥಿಗಳು ಹಿಮಾಲಯದ ದೇಗುಲದಲ್ಲಿ ಲಘು ಹಿಮಪಾತ ಮತ್ತು ಮಳೆಯ ನಡುವೆ ಜಮಾಯಿಸಿದ್ದರು. ದೇವಾಲಯ ದ್ವಾರ ತೆಗೆಯುತ್ತಿದ್ದಂತೆ ಭಗವಾನ್ ವಿಷ್ಣುವಿಗೆ ನಮನ ಸಲ್ಲಿಸಿದರು.

ಈ ವೇಳೆ ದೇವಸ್ಥಾನವನ್ನು 15 ಕ್ವಿಂಟಾಲ್ ಹೂವಿನಿಂದ ಅಲಂಕರಿಸಲಾಗಿತ್ತು ಮತ್ತು ಉದ್ಘಾಟನಾ ಸಮಾರಂಭದ ನಂತರ ಅದರ ಪ್ರಧಾನ ಅರ್ಚಕ ಈಶ್ವರಿ ಪ್ರಸಾದ್ ನಂಬೂದಿರಿ ಅವರು ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.

ಇದನ್ನು ಓದಿ: ಕರ್ನಾಟಕದ ವಿಕಾಸವೆಂದರೆ ದೇಶದ ವಿಕಾಸ, ರಾಜ್ಯದ ಅಭಿವೃದ್ಧಿಗೆ ಪೂರ್ಣ ಬಹುಮತ ನೀಡಿ ಬಿಜೆಪಿಯನ್ನು ಗೆಲ್ಲಿಸಿ: ವರ್ಚುವಲ್ ಸಂವಾದದಲ್ಲಿ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮೊದಲ ಪೂಜೆಯನ್ನು ಮಾಡಲಾಯಿತು ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ತಿಳಿಸಿದೆ. 

ಗುರುವಾರ ಬದರಿನಾಥ ತೆರೆಯುವುದರೊಂದಿಗೆ, ಉತ್ತರಾಖಂಡದ ಎಲ್ಲಾ ಚಾರ್ ಧಾಮ್ ದೇವಾಲಯಗಳು ಈಗ ಯಾತ್ರಾರ್ಥಿಗಳ ದರ್ಶನಕ್ಕೆ ಮುಕ್ತವಾಗಿವೆ.

ಗಂಗೋತ್ರಿ ಮತ್ತು ಯಮುನೋತ್ರಿ ಏಪ್ರಿಲ್ 22 ರಂದು ಹಾಗೂ ಕೇದಾರನಾಥ ದೇವಾಲಯವನ್ನು ಏಪ್ರಿಲ್ 25 ರಂದು ತೆರೆಯಲಾಗಿದೆ.  (KANNAD PRABHA)

31 Days ago