A part of Indiaonline network empowering local businesses

ಭಯೋತ್ಪಾದಕ ಕೃತ್ಯಕ್ಕೆ ಸಂಚು: ಪ್ರಮುಖ ಆರೋಪಿ ನಜೀರ್ ವಶಕ್ಕೆ ಪಡೆದ ಸಿಸಿಬಿ

news

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಜ ಇತರೆಡೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಎಲ್‌ಇಟಿ ಉಗ್ರ ನಜೀರ್ ಅಲಿಯಾಸ್ ಉಮ್ಮರ್ ಹಾಜಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನಜೀರ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 149/2023 ರ ಪ್ರಮುಖ ಆರೋಪಿ ನಜೀರ್, ಹೆಚ್ಚಿನ ಭದ್ರತೆಯ ನಡುವೆಯೂ ಐವರು ಆರೋಪಿಗಳನ್ನು ಉಗ್ರಗಾಮಿಗಳಾಗಿ ಹೇಗೆ ಪರಿವರ್ತಿಸಿದ ಎಂಬುದರ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಇದರ ಜೊತೆಗೆ ಬಂಧಿತ ಶಂಕಿತ ಉಗ್ರರಿಗೆ ಮದ್ದುಗುಂಡುಗಳನ್ನು ಪೂರೈಸುವಲ್ಲಿ ಆತನ ಪಾತ್ರದ ಕುರಿತಂತೆಯೂ ಪ್ರಶ್ನಿಸುತ್ತಿದ್ದಾರೆಂದು ತಿಳಿದುಬಂದಿದೆ.

2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಜೀರ್ ಪ್ರಮುಖ ಆರೋಪಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿ ನಂಬರ್ 2 ಜುನೈದ್ ಅಹ್ಮದ್ ಎಲ್ಲಿದ್ದಾನೆಂಬುದರ ಕುರಿತು ನಜೀರ್‌ಗೆ ತಿಳಿದಿದೆಯೇ ಎಂಬುದರ ಕುರಿತಂತೆಯೂ ಸಿಸಿಬಿ ವಿಚಾರಣೆ ನಡೆಸುತ್ತಿದೆ.

ಈ ನಡುವೆ ಶಂಕಿತರೊಬ್ಬರಿಗೆ ಬಂದೂಕುಗಳನ್ನು ಪೂರೈಸಿದ ಸಲ್ಮಾನ್‌ನನ್ನೂ ಅಧಿಕಾರಿಗಳು ಪತ್ತೆ ಮಾಡಿದ್ದಾರೆಂದು ತಿಳಿದುಬಂದಿದೆ.

ಜುನೈದ್ ಸೂಚನೆ ಮೇರೆಗೆ ತುಮಕೂರು ರಸ್ತೆಯ ಟಿ ಬೇಗೂರಿನಲ್ಲಿ ಶಂಕಿತರಿಗೆ ಬಂದೂಕುಗಳನ್ನು ಹಸ್ತಾಂತರಿಸಲಾಗಿತ್ತು ಎಂಬ ವಿಚಾರ ಅಧಿಕಾರಿಗಳಿಗೆ ಸಿಕ್ಕಿದೆ.

ಈ ಹಿಂದೆ ಸಲ್ಮಾನ್ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ. ಈತ ನೇಪಾಳ ಗಡಿ ಮೂಲಕ ದೇಶ ತೊರೆದಿರುವ ಶಂಕೆ ವ್ಯಕ್ತವಾಗಿದೆ.

ಐವರು ಭಯೋತ್ಪಾದಕರಲ್ಲಿ ಒಬ್ಬನಿಗೆ ಬಂದೂಕುಗಳನ್ನು ಪೂರೈಸಿದ ಆರೋಪಿಗಳ ಬಗ್ಗೆ ನಮಗೆ ಸುಳಿವು ಸಿಕ್ಕಿದೆ" ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಎಸ್‌ಡಿ ಶರಣಪ್ಪ ಅವರು ಮಾಹಿತಿ ನೀಡಿದ್ದಾರೆ.

ಸುಲ್ತಾನಪಾಳ್ಯದ ನಿವಾಸಿ ಸೈಯದ್ ಸುಹೇಲ್ ಖಾನ್ (24), ಕೊಡಿಗೇಹಳ್ಳಿಯ ಮಹಮ್ಮದ್ ಉಮರ್ (29), ಭದ್ರಪ್ಪ ಲೇಔಟ್‌ನ ಜಾಹಿದ್ ತಬ್ರೇಜ್ (25), ದಿನ್ನೂರು ಮುಖ್ಯರಸ್ತೆಯ ಸೈಯದ್ ಮುದಸ್ಸಿರ್ ಪಾಷಾ (28) ಮತ್ತು ಮೊಹಮ್ಮದ್ ಫೈಸಲ್ (30) ಐವರು ಭಯೋತ್ಪಾದಕರ ಶಂಕಿತ ಆರೋಪಿಗಳಾಗಿದ್ದಾರೆ.

ಜುಲೈ 18ರಂದು ಸುಲ್ತಾನಪಾಳ್ಯ ಮುಖ್ಯರಸ್ತೆಯಲ್ಲಿರುವ ಸುಹೇಲ್ ಖಾನ್ ಅವರ ಮನೆಯಲ್ಲಿ ಐವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಐವರು ಶಂಕಿತರ ಕಸ್ಟಡಿಯನ್ನು ಇನ್ನೂ 10 ದಿನಗಳವರೆಗೆ ವಿಸ್ತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ (KANNAD PRABHA)

59 Days ago