A part of Indiaonline network empowering local businesses

ಭಾರತ ಸಿದ್ಧಪಡಿಸಿದ ಕೆಮ್ಮಿನ ಸಿರಪ್‌ನಿಂದ 18 ಮಕ್ಕಳ ಸಾವು: ಗ್ಯಾಂಬಿಯಾ ಬಳಿಕ ಇದೀಗ ಉಜ್ಬೇಕಿಸ್ತಾನದಿಂದ ಆರೋಪ

News

ತಾಷ್ಕೆಂಟ್: ಕಳೆದ ಕೆಲ ತಿಂಗಳ ಹಿಂದೆ ಗ್ಯಾಂಬಿಯಾ ದೇಶದ ಸುಮಾರು 70 ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಕಾರಣ ಎಂದು ಆರೋಪ ಮಾಡಲಾಗಿತ್ತು. ಇದೀಗ ಉಜ್ಬೇಕಿಸ್ತಾನವೂ ಕೂಡ ಇದೇ ರೀತಿಯ ಆರೋಪವೊಂದನ್ನು ಮಾಡಿದೆ.

ತನ್ನ ದೇಶದ ಸುಮಾರು 18 ಮಕ್ಕಳ ಸಾವಿನಲ್ಲಿ ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್‌ನ ಪಾತ್ರವಿದೆ ಎಂದು ಉಜ್ಬೇಕಿಸ್ತಾನ ಆರೋಪಿಸಿದೆ. 

ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ದೇಶದಲ್ಲಿ ಕನಿಷ್ಠ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ ಹೇಳಿಕೊಂಡಿದೆ.

ಸಾವನ್ನಪ್ಪಿದ 18 ಮಕ್ಕಳು ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಡಾಕ್-1 ಮ್ಯಾಕ್ಸ್ ಅನ್ನು ಸೇವಿಸಿದ್ದಾರೆ ಎಂದು ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಿರಪ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ ಎಥಿಲೀನ್ ಗ್ಲೈಕೋಲ್ ಎಂಬ ವಿಷಕಾರಿ ಅಂಶ ಪತ್ತೆಯಾಗಿದೆ. ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳದೇ ಪೋಷಕರು ಮಕ್ಕಳಿಗೆ ಕೆಮ್ಮಿನ ಸಿರಪ್ ಅನ್ನು ಅಗತ್ಯ ಪ್ರಮಾಣಕ್ಕಿಂತಲೂ ಹೆಚ್ಚಿನ ಡೋಸ್ ನೀಡಿದ್ದಾರೆ ಎಂದು ಹೇಳಿದೆ.

ವರದಿಗಳ ಪ್ರಕಾರ, ಶೀತ ಹಾಗೂ ಜ್ವರ ಇದ್ದ ಮಕ್ಕಳಿಗೆ ಈ ಸಿರಪ್ ನೀಡಲಾಗುತ್ತದೆ. ಇದೀಗ 18 ಮಕ್ಕಳ ಸಾವಿನ ಬಳಿಕ ದೇಶದ ಎಲ್ಲಾ ಔಷಧಾಲಯಗಳಿಂದ ಡಾಕ್-1 ಮ್ಯಾಕ್ಸ್ ಮಾತ್ರೆಗಳು ಹಾಗೂ ಸಿರಪ್‌ಗಳನ್ನು ಹಿಂಪಡೆಯಲಾಗಿದೆ.

ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ನೋಯ್ಡಾ ಮೂಲದ ಡ್ರಗ್ ಮೇಕರ್ ತಯಾರಿಸಿರುವ ಸಿರಪ್‌ನೊಂದಿಗೆ ಸಂಬಂಧವಿರುವ ಶಂಕೆಯ ಮೇಲೆ ಭಾರತ ತನಿಖೆಯನ್ನು ಆರಂಭಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
 
  (KANNAD PRABHA)

270 Days ago

Video News