ಬೇಲೂರು: ಬೇಲೂರಿನ ಪ್ರಸಿದ್ಧ ರಥೋತ್ಸವ ಇಂದು ಯಾವುದೇ ವಿವಾದವಿಲ್ಲದೇ ಮುಕ್ತಾಯಗೊಂಡಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ರಥ ಎಳೆದು ಸಂಭ್ರಮಿಸಿದರು. ಸಂಪ್ರದಾಯದ ಭಾಗವಾಗಿ ಭಗವಾನ್ ಚನ್ನಕೇಶವನ ರಥದತ್ತ ಭಕ್ತಾದಿಗಳು ಬಾಳೆಹಣ್ಣು ಹಾಗೂ ಜವನ ಎಲೆಗಳನ್ನು ತೂರಿದರು. ಇನ್ನು ಮೌಲ್ವಿ ಬಾಶಾ ಖಾದ್ರಿ ಸಾಹೇಬ್ ದೇವಾಲಯದ ಮೆಟ್ಟಿಲ ಮೇಲೆ ನಿಂತು ಪ್ರಾರ್ಥನೆ ಸಲ್ಲಿಸಿದರು, ಈ ಬಳಿಕ ದೇವಾಲಯದ ಸಮಿತಿ ಬಾಶಾ ಖಾದ್ರಿ ಅವರನ್ನು ಗೌರವಿಸಿತ್ತು.
ರಥದ ಎದುರು ಸ್ಥಾಪನೆಗೊಳ್ಳುತ್ತಿದ್ದ ಚೆನ್ನಕೇಶವ ವಿಗ್ರಹದ ಎದುರು ಮುಸ್ಲಿಮ್ ಮೌಲ್ವಿ ಕುರಾನ್ ನ್ನು ಪಠಿಸಿದ ಬಳಿಕ ರಥ ಎಳೆಯುವ ಪ್ರಕ್ರಿಯೆಗೆ ಚಾಲನೆ ನೀಡುವ ಸಂಪ್ರದಾಯ ಇತ್ತು. ರಥ ಎಳೆಯುವುದಕ್ಕೂ ಮುನ್ನ ಮೌಲ್ವಿ ಕುರಾನ್ ನ್ನು ಪಠಿಸುವ ಸಂಪ್ರದಾಯವನ್ನು ಹಿಂದೂ ಸಂಘಟನೆಗಳು ಈ ಬಾರಿ ವಿರೋಧಿಸಿದ್ದವು.
ರಥದ ಎದುರು ಕುರಾನ್ ಪಠಿಸದೇ ಇದೇ ಮೊದಲ ಬಾರಿಗೆ ರಥ ಎಳೆಯಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. 1:50 ಕ್ಕೆ ಸರಿಯಾಗಿ ದೇವಾಲಯದ ಪ್ರಧಾನ ಅರ್ಚಕರಾದ ವೆಂಕಟೇಶ್ ವಾದ್ಯ ಮೊಳಗಿಸಿದ ಬಳಿಕ ಪ್ರಕ್ರಿಯೆಗಳು ಪ್ರಾರಂಭಗೊಂಡವು, ಹಿರಿಯ ಅರ್ಚಕರಾದ ಶ್ರೀನಿವಾಸ್ ಭಟ್, ನರಸಿಂಹ ಭಟ್ ಅವರು ಧಾರ್ಮಿಕ ವಿಧಿವಿಧಾನಗಳ ಉಸ್ತುವಾರಿ ವಹಿಸಿದ್ದರು. ರಥೋತ್ಸವದ ವೇಳೆ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ, ಸ್ಥಳೀಯ ಶಾಸಕ ಕೆಎಸ್ ಲಿಂಗೇಶ್, ದೇವಾಲಯದ ಆಡಳಿತಾಧಿಕಾರಿ ವಿದುಲತ ಭಾಗಿಯಾಗಿದ್ದರು. (KANNAD PRABHA)