A part of Indiaonline network empowering local businesses

ಹೇಮಾ ಮಾಲಿನಿ- ಧರ್ಮೇಂದ್ರ ಪುತ್ರಿ ದಾಂಪತ್ಯದಲ್ಲಿ ಬಿರುಕು: 12 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಇಶಾ ಡಿಯೋಲ್

News

ಮುಂಬಯಿ: ಬಾಲಿವುಡ್‌ ‘ಡ್ರೀಮ್ ಗರ್ಲ್’ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ದಂಪತಿಯ ಪುತ್ರಿ ಇಶಾ ಡಿಯೋಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ವರದಿಗಳ ಪ್ರಕಾರ, ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ದೂರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಡಿವೋರ್ಸ್ ನ್ಯೂಸ್ ಹರಿದಾಡುತ್ತಿದೆ.

ಉದ್ಯಮಿ ಭರತ್ ತಖ್ತಾನಿ ಅವರೊಂದಿಗೆ ಕೆಲ ಕಾಲ ಡೇಟಿಂಗ್​​ ನಡೆಸಿದ ಇಶಾ ಡಿಯೋಲ್​​​​, 2012 ರ ಜೂನ್ 29ರಂದು ಹಸೆಮಣೆ ಏರಿದ್ದರು. ಇಶಾ ಮತ್ತು ಭರತ್ ಮುಂಬೈನ ಇಸ್ಕಾನ್ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದರು. ಈ ದಂಪತಿ ರಾಧ್ಯ ಮತ್ತು ಮಿರಾಯಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಇಶಾ ಮತ್ತು ಭರತ್ ತಮ್ಮ 12 ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಲಿದ್ದಾರೆ.

ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲಿದ್ದಾರಂತೆ ಎಂಬ ಅಂತೆ - ಕಂತೆ ಬಾಲಿವುಡ್ ತುಂಬೆಲ್ಲಾ ಹಬ್ಬಿತ್ತು. ಇದೀಗ ಡಿವೋರ್ಸ್ ವದಂತಿಯನ್ನ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಖಚಿತ ಪಡಿಸಿದ್ದಾರೆ ಎನ್ನಲಾಗಿದೆ.

ಕಳೆದ ಕೆಲವು ದಿನಗಳಿಂದ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಎಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ, ಇಬ್ಬರೂ ದೂರಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. 2012ರಲ್ಲಿ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 2017ರಲ್ಲಿ ಮಗಳು ರಾಧ್ಯಗೆ ಇಶಾ ಡಿಯೋಲ್‌ ಜನ್ಮ ನೀಡಿದರು. 2019ರಲ್ಲಿ ಎರಡನೇ ಮಗುವನ್ನ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಬರಮಾಡಿಕೊಂಡಿದ್ದರು. ಇದೀಗ 12 ವರ್ಷಗಳ ದಾಂಪತ್ಯ ಜೀವನಕ್ಕೆ ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಅಂತ್ಯ ಹಾಡಿದ್ದಾರೆ.

ಜಂಟಿ ಹೇಳಿಕೆಯಲ್ಲಿ, ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ತಾವು ದೂರವಾಗಲು ನಿರ್ಧರಿಸಿರುವುದಾಗಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. "ನಾವು ಪರಸ್ಪರ ಮತ್ತು ಸೌಹಾರ್ದಯುತವಾಗಿ ಬೇರ್ಪಡಲು ನಿರ್ಧರಿಸಿದ್ದೇವೆ. ನಮ್ಮ ಜೀವನದಲ್ಲಿ ಈ ಬದಲಾವಣೆ ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನಮ್ಮ ಇಬ್ಬರು ಮಕ್ಕಳ ಹಿತಾಸಕ್ತಿ ಮತ್ತು ಯೋಗಕ್ಷೇಮವು ನಮ್ಮ ಪ್ರಮುಖ ಆದ್ಯತೆ ಆಗಿದೆ. ನಮ್ಮ ಗೌಪ್ಯತೆ ಗೌರವಿಸಿದರೆ ನಾವು ಅದನ್ನು ಪ್ರಶಂಸಿಸುತ್ತೇವೆ" ಎಂದು ತಿಳಿಸಿದ್ದಾರೆಂದು ವರದಿಯಾಗಿದೆ.

ಇಶಾ ಡಿಯೋಲ್​​, ನಾ ತುಮ್ ಜಾನೋ ನಾ ಹಮ್, ಕ್ಯಾ ದಿಲ್ ನೆ ಕಹಾ, ಹೈಜಾಕ್ ಮತ್ತು ಪ್ಯಾರೆ ಮೋಹನ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅಜಯ್ ದೇವ್​​​ಗನ್ ಅವರ ರುದ್ರ: ದಿ ಎಡ್ಜ್ ಆಫ್ ಡಾರ್ಕ್​​​ನೆಸ್​ ಮೂಲಕ ಒಟಿಟಿಗೂ ಎಂಟ್ರಿ ಕೊಟ್ಟಿದ್ದಾರೆ. (KANNAD PRABHA)

22 Days ago