ನವದೆಹಲಿ: ಕೇಂದ್ರದ ಆಡಳಿತರೂಢ ಬಿಜೆಪಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದು, ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ಅನಿಮೇಟೆಡ್ ವೀಡಿಯೋ ಬಿಡುಗಡೆ ಮಾಡಿದೆ.
ಪ್ರಧಾನಿ ಮೋದಿ ಅವರು ಸಮಾಜದ ವಿವಿಧ ವರ್ಗಗಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಮುನ್ನಡೆಯುತ್ತಿದ್ದಾರೆ ಮತ್ತು ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ದೃಢವಾದ ಹೆಜ್ಜೆಗಳನ್ನು ಹಾಕುತ್ತಿದ್ದಾರೆ ಎಂದು ತೋರಿಸುವ ಕಿರು ಅನಿಮೇಟೆಡ್ ವೀಡಿಯೊವನ್ನು ಭಾರತೀಯ ಜನತಾ ಪಕ್ಷವು ಬಿಡುಗಡೆ ಮಾಡಿದೆ.
ಇದನ್ನು ಓದಿ: ವಿದೇಶಿ ಕಂಪನಿ 'ಎಲಾರ'ವನ್ನು ನಿಯಂತ್ರಿಸುವವರು ಯಾರು: ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಹೊಸ ಆರೋಪ
ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಂತಹ ಕಾಂಗ್ರೆಸ್ ನಾಯಕರ ವಾಗ್ದಾಳಿಗಳ ನಡುವೆಯೇ ಬಿಜೆಪಿ, ಮುಜೆ ಚಲ್ತೇ ಜಾನಾ ಹೈ(ನಾನು ನಡೆಯುತ್ತಲೇ ಇರುತ್ತೇನೆ) ಎಂಬ ಶೀರ್ಷಿಕೆಯ ನಾಲ್ಕು ನಿಮಿಷ ಮೂವತ್ತೆರಡು ಸೆಕೆಂಡಗಳ ವೀಡಿಯೋ ಬಿಡುಗಡೆ ಮಾಡಿದ್ದು, ಮೋದಿ ಗುಜರಾತ್‌ನ ಮುಖ್ಯಮಂತ್ರಿ ಹುದ್ದೆಯಿಂದ ಪ್ರಧಾನಿ ಹುದ್ದೆಯವರೆಗೆ ಸಾಗಿಬಂದ ಹಾದಿಯನ್ನು ತೋರಿಸಲಾಗಿದೆ.
ಮೋದಿ ಪ್ರಧಾನಿ ಕುರ್ಚಿಯತ್ತ ಸಾಗುವ ಮೆಟ್ಟಿಲುಗಳ ಮೇಲೆ ನಡೆಯಲು ಪ್ರಾರಂಭಿಸಿದಾಗ, ಅವರನ್ನು ಸೋನಿಯಾ ಗಾಂಧಿ ಅವರು ‘ಮೌತ್ ಕಾ ಸೌದಾಗರ್’ ಎಂದು ಉಲ್ಲೇಖಿಸುತ್ತಾರೆ. ಎಲ್ಲಾ ದಾಳಿಗಳನ್ನು ವಿರೋಧಿಸಿ, ಮೋದಿ ಅವರು ತಮ್ಮ ನಡಿಗೆಯನ್ನು ಮುಂದುವರಿಸುವುದನ್ನು ಕಾಣಬಹುದು. ‘ಚಾಯ್‌ವಾಲಾ’ ಎಂದು ಕರೆದು ಅಮೆರಿಕ ವೀಸಾ ನಿಷೇಧಕ್ಕಾಗಿ ಲೇವಡಿ ಮಾಡಲಾಗುತ್ತಿದೆ. 2014 ರಲ್ಲಿ ಪ್ರಧಾನಿಯಾದ ನಂತರ, ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಮೋದಿಗೆ ‘ಯುಎಸ್‌ಗೆ ಆಹ್ವಾನ’ ನೀಡುವುದನ್ನು ಇದರಲ್ಲಿ ಚಿತ್ರಿಸಲಾಗಿದೆ.
ಸ್ವಚ್ಛ ಭಾರತ್ ಮಿಷನ್’, ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’, ‘ಉಜ್ವಲ ಯೋಜನೆ’, ‘ಜನ್ ಧನ್ ಯೋಜನೆ’, ‘ಜೀವನ ಜ್ಯೋತಿ ಬಿಮಾ ಯೋಜನೆ’, ‘ಪಿಎಂ ಆವಾಸ್ ಯೋಜನೆ’ ಮತ್ತು ‘ಫಸಲ್ ಬಿಮಾ ಯೋಜನಾ’ ವನ್ನು ಇಲ್ಲಿ ಹೈಲೈಟ್ ಮಾಡಲಾಗಿದೆ. (KANNAD PRABHA)