A part of Indiaonline network empowering local businesses

ಕೊರೋನಾ ಎಫೆಕ್ಟ್: ಸಿಎಂ ಬೊಮ್ಮಾಯಿ ತವರು ಜಿಲ್ಲೆಯೊಂದರಲ್ಲೇ ಶಾಲೆ ತೊರೆದಿರುವ 920 ಮಕ್ಕಳು!

News

ಹಾವೇರಿ: ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡುವ ಸರ್ಕಾರದ ಪ್ರಯತ್ನಕ್ಕೆ ಭಾರಿ ಹಿನ್ನೆಡೆಯುಂಟಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಕ್ಷೇತ್ರ ಹಾವೇರಿಯಲ್ಲಿ 6 ರಿಂದ 16 ವರ್ಷದೊಳಗಿನ 920 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗದ ನಂತರ ಶಾಲೆ ತೊರೆದಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯೊಂದರಲ್ಲಿ ಈ ವಿಚಾರ ತಿಳಿದಬಂದಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವ ಕ್ಷೇತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿದ್ದಾರೆ.

 
 ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗಳಿಗೆ ಕರೆ ತರಲು ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಕರೆ ತನ್ನಿ: ಜಿಲ್ಲೆ ಪಿಯು ಕಾಲೇಜು ಪ್ರಾಂಶುಪಾಲರಿಗೆ ಶಿಕ್ಷಣ ಇಲಾಖೆ ಸೂಚನೆ

ಈ ಕುರಿತು ಹಾವೇರಿಯ ಸಾಮಾಜಿಕ ಕಾರ್ಯಕರ್ತ ಶಿವಪ್ರಕಾಶ ಹಂಚಿನವರ ಮಾತನಾಡಿ, ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಶಾಲೆ ಬಿಟ್ಟ ಮಕ್ಕಳು ವರದಿಯಾಗುತ್ತಿರುವುದಕ್ಕೆ ನಾನಾ ಕಾರಣಗಳಿವೆ. ''ಭಾರತೀಯ ಸಂವಿಧಾನದಲ್ಲಿ 6-14 ವರ್ಷದ ಮಕ್ಕಳಿಗೆ ಶಿಕ್ಷಣದ ಹಕ್ಕು ಇರಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಸಮೀಕ್ಷೆ ನಡೆಸಿದಾಗ ಬಂದ ಅಂಕಿ ಅಂಶಗಳು ಬೆಚ್ಚಿಬೀಳಿಸುವಂತಿವೆ. ಇತರೆ ಶೈಕ್ಷಣಿಕ ಜಿಲ್ಲೆಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಇನ್ನೂ ಲೆಕ್ಕ ಹಾಕದಿದ್ದರೂ ಹಾವೇರಿಯಲ್ಲಿ ಈ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸರ್ಕಾರದ ಬಳಿ ಕಾರಣಗಳಿವೆ. 920 ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಹಜ ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಶಾಲೆ ಬಿಟ್ಟ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರಗೊಂಡಿದ್ದಾರೆಂದು ತಿಳಿಸಿದ್ದಾರೆ.    

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಹಾವೇರಿ ಜಿಲ್ಲೆಯ ಡಿಡಿಪಿಐ ಜಗದೀಶ್ವರ್ ಅವರು, ಶಾಲೆ ಬಿಟ್ಟ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಪತ್ತೆಹಚ್ಚಲು ಪ್ರಯತ್ನ ನಡೆಸಲಾಗುತ್ತಿದೆ. ‘‘ವಾರ್ಡ್‌ಗಳಲ್ಲಿ ವ್ಯಾಸಂಗ ನಿಲ್ಲಿಸಿರುವ ಪೋಷಕರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದೇವೆ. ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸುವಂತೆ ತಿಳಿಸಲಾಗುತ್ತಿದೆ. ಶಿಕ್ಷಣ ಇಲಾಖೆಯಿಂದ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಈ ಸಂಬಂಧ ಅಗತ್ಯ ಕ್ರಮಗಳ ಕೈಗೊಳ್ಳುವಂತೆ ತಿಳಿಸಲಾಗಿದೆ. ಮರಳಿ ಶಾಲೆಗೆ ಬರಲು ಇಚ್ಛಿಸುವ ಮಕ್ಕಳನ್ನು ದಾಖಲು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ. (KANNAD PRABHA)

528 Days ago