A part of Indiaonline network empowering local businesses
Chaitra Navratri

ಫೆ.26ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ‘ಗೋ ಗ್ರೀನ್’, ‘ಫಿಲಂ ಬಜಾರ್' ಈ ಬಾರಿಯ ವಿಶೇಷ

News

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷ ಸುನಿಲ್ ಪುರಾಣಿಕ್ 12ನೇ ಚಲನಚಿತ್ರೋತ್ಸವನ್ನು ವಿಶಿಷ್ಟವನ್ನಾಗಿಸಲು ಶ್ರಮಿಸುತ್ತಿದ್ದು, ಈ ಬಾರಿಯ ವಿಶೇಷತೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.


 “ನಗರದ ಎಲ್ಲ ಭಾಗದಲ್ಲಿರುವ ಜನರು ಚಿತ್ರೋತ್ಸವದ ಸಂಭ್ರಮದಲ್ಲಿ ಭಾಗಿಯಾಗಲು ಅವಕಾಶವಾಗುವಂತೆ ಈ ವರ್ಷ ಒರಾಯನ್ ಮಾಲ್ ಜತೆಗೆ ಚಾಮರಾಜಪೇಟೆಯ ಕಲಾವಿದರ ಸಂಘ, ಡಾ ರಾಜ್ ಕುಮಾರ್ ರಸ್ತೆಯಲ್ಲಿರುವ ನವರಂಗ್ ಚಿತ್ರಮಂದಿರ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿಯೂ ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದರು.


 ಇದೇ  26ರಂದು  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದು, 27 ರಿಂದ 7 ದಿನಗಳ ಕಾಲ 200ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ನಡೆಯಲಿದ್ದು, ಜನಪ್ರಿಯ ಮೇರು ನಟ ಅನಂತನಾಗ್ ಅಭಿನಯದ ಅತ್ಯುತ್ಕೃಷ್ಟವಾದ 9 ರಿಂದ 10 ಚಿತ್ರಗಳನ್ನು ಪ್ರೇಕ್ಷಕರು ವೀಕ್ಷಿಸಿ ಆನಂದಿಸಬಹುದಾಗಿದೆ.

 ಅಲ್ಲದೆ, ಚಂದನವನದ ನಿರ್ಮಾಪಕರು, ನಿರ್ದೇಶಕರು ತಮ್ಮ ಚಲನಚಿತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ ಮಾರಾಟಕ್ಕೆ ಅವಕಾಶವಾಗುವಂತೆ ‘ಫಿಲ್ಮ್ ಬಜಾರ್’ ವೇದಿಕೆಯನ್ನು ಕಲ್ಪಿಸಲಾಗಿದೆ  ‘ಗೋ ಗ್ರೀನ್’ ಅಡಿಯಲ್ಲಿ  ಚಲನಚಿತ್ರೋತ್ಸವವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಎಲ್ಲ ಬಗೆಯ ಕ್ರಮ ಕೈಗೊಳ್ಳಲಾಗಿದೆ  ಎಂದು ಮಾಹಿತಿ ನೀಡಿದರು. 

ಪ್ರೇಕ್ಷಕರಿಗೆ ಸಂಗೀತದ ರಸದೌತಣ:

ಈ ಬಾರಿಯ 12ನೇ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಭಾರತೀಯ ಸಂಗೀತ ಪರಂಪರೆ ಮತ್ತು ಸಿನಿಮಾ ವಿಷಯಾಧಾರಿತ ವಿಭಾಗದಲ್ಲಿ ಬೈಜು ಬಾವ್ರಾ, ತ್ಯಾಗರಾಜರು, ಪುರಂದರದಾಸರು, ಸ್ವಾತಿ ತಿರುನಾಳ್, ತಾನ್‍ಸೇನ್, ಮೀರಾ ಮೊದಲಾದವರ ಸಂಗೀತ ಪ್ರಧಾನ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.


ಏಳು ದಿನಗಳ ಸಿನಿಮೋತ್ಸವದಲ್ಲಿ ವಿಶ್ವ ಸಿನಿಮಾ, ಚಿತ್ರಭಾರತಿ, ಭಾರತೀಯ ಚಿತ್ರಗಳ ಸ್ಪರ್ಧಾ ವಿಭಾಗ, ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಏಷಿಯನ್ ಸಿನಿಮಾ, ಆತ್ಮಚರಿತ್ರೆ ಆಧಾರಿತ ಚಿತ್ರಗಳು ಸೇರಿದಂತೆ ಕಣ್ಮರೆಯಾದ ನಟ-ನಿರ್ದೇಶಕರ ಸ್ಮರಣೆ, ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಬಹುದಾಗಿದೆ.


ಆನ್‍ಲೈನ್ ನೋಂದಣಿ ಲಭ್ಯ: 
ಸಿನಿಮೋತ್ಸವದಲ್ಲಿ ಪಾಲ್ಗೊಳ್ಳಲು ಬುಕ್ ಮೈ ಶೋ ವತಿಯಿಂದ ಆನ್‍ ಲೈನ್ ಸೌಲಭ್ಯ ಕಲ್ಪಿಸಲಾಗಿದ್ದು, ಪ್ರವೇಶ ಶುಲ್ಕ 800 ರೂಪಾಯಿ ನಿಗದಿಯಾಗಿದೆ. ಚಿತ್ರರಂಗದವರು ಮತ್ತು ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ 400 ರೂಪಾಯಿ ಇರಲಿದೆ
ರಾಜ್ಯಪಾಲರ ನೇತೃತ್ವದಲ್ಲಿ ಮಾರ್ಚ್ 4ರಂದು ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್‍ ಮತ್ತು ರಿಜಿಸ್ಟ್ರಾರ್ ಹಿಮಂತ್ ರಾಜ್ ವಿವರಿಸಿದರು.

(KANNADA PRABHA)

1526 Days ago