A part of Indiaonline network empowering local businesses
Chaitra Navratri

ಮುಂದಿನ 5 ದಿನ ಕರ್ನಾಟಕದಾದ್ಯಂತ ಭಾರೀ ಮಳೆ: ಜಿಲ್ಲೆಗಳಿಗೆ ಕಟ್ಟೆಚ್ಚರ, ಹವಾಮಾನ ಇಲಾಖೆ ಎಚ್ಚರಿಕೆ

news

ಬೆಂಗಳೂರು: ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಇಂದು ಮತ್ತು ನಾಳೆ ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳಭಾಗಕ್ಕೆ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ. 

ಉತ್ತರ ತಮಿಳುನಾಡು ಮತ್ತು ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಮಳೆಯು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಮೀ ವರೆಗೆ ವಿಸ್ತರಿಸಿದೆ.

ರಾಯಲಸೀಮಾ, ತೆಲಂಗಾಣ, ವಿದರ್ಭ ಮತ್ತು ಪಶ್ಚಿಮ ಮಧ್ಯಪ್ರದೇಶದಾದ್ಯಂತ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ, ಉತ್ತರ ತಮಿಳುನಾಡು ಮತ್ತು ನೆರೆಹೊರೆ ಅಥವಾ ಪೂರ್ವ ರಾಜಸ್ಥಾನದ ಮೇಲೆ ಚಂಡಮಾರುತದ ಪರಿಚಲನೆ ಇದೆ. ನೈಋತ್ಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಉತ್ತರ ಶ್ರೀಲಂಕಾ ಕರಾವಳಿಯ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಇದೆ. ಗುಡುಗು, ಮಿಂಚು, ಜೋರಾದ ಗಾಳಿ ಮತ್ತು ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಇಂದು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ಕೋಲಾರ ಜಿಲ್ಲೆಗಳು ಮಳೆಯ ತೀವ್ರ ಹೊಡೆತಕ್ಕೆ ಸಿಲುಕಲಿವೆ. 

ಬೆಂಗಳೂರಿನಲ್ಲಿ ಭಾರೀ ಮಳೆ: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಾಯಂಕಾಲದಿಂದ ಭಾರೀ ಮಳೆಯಾಗುತ್ತಿದ್ದು ಅದು ಇಂದು ಬೆಳಗ್ಗೆಯೂ ಮುಂದುವರಿದಿದೆ. ಗುಡುಗು ಸಹಿತ ಮಳೆಯಾಗುತ್ತಿದ್ದು ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಕಚೇರಿಗಳಿಗೆ, ಕೆಲಸ ಕಾರ್ಯಗಳಿಗೆ ಹೋಗುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ರಸ್ತೆಗಳಲ್ಲಿ ಹೊಂಡ ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರಿಗೆ ಕಷ್ಟವಾಗುತ್ತಿದೆ. ತುಮಕೂರು, ಬೆಂಗಳೂರು ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಲಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮೊರಬಾದಲ್ಲಿ ಗ್ರಾಮಕ್ಕೆ ನುಗ್ಗಿದ ನೀರು: ಧಾರವಾಡದ ಮೊರಬಾ ಗ್ರಾಮದಲ್ಲಿ ಅವಾಂತರ: ಹುಬ್ಬಳ್ಳಿ ಧಾರವಾಡದಲ್ಲಿ ಮಳೆಯಿಂದಾಗಿ ಅನಾಹುತ ಸಂಭವಿಸಿದ್ದು, ನವಲಗುಂದ ತಾಲೂಕಿನ ಮೊರಬ ಗ್ರಾಮದ ಕೆಲವೆಡೆ ತುಪರಿಹಳ್ಳ ಹೊಳೆ ನೀರು ಹರಿದು ಗ್ರಾಮಸ್ಥರು ತಮ್ಮ ಜೀವ, ಆಸ್ತಿಪಾಸ್ತಿಯ ಚಿಂತೆಯಲ್ಲಿ ಕಳೆದ ರಾತ್ರಿಯಿಡೀ ನಿದ್ದೆಯಿಲ್ಲದೆ ಕಾಲ ಕಳೆದಿದ್ದಾರೆ.  (KANNAD PRABHA)

556 Days ago