A part of Indiaonline network empowering local businesses
Chaitra Navratri

ಸಾಲ ಮರುಪಾವತಿಗೆ ಹೆಣ್ಣುಮಕ್ಕಳ ಹರಾಜು, ತಾಯಂದಿರ ಮೇಲೆ ಅತ್ಯಾಚಾರ; ಸತ್ಯಶೋಧನಾ ಸಮಿತಿ ರಚಿಸಿದ ಮಹಿಳಾ ಆಯೋಗ

News

ಜೈಪುರ: ರಾಜಸ್ತಾನದಲ್ಲಿ ವರದಿಯಾಗಿದ್ದ ಸಾಲ ಮರುಪಾವತಿಗೆ ಹೆಣ್ಣುಮಕ್ಕಳ ಹರಾಜು, ತಾಯಂದಿರ ಮೇಲೆ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಮಹಿಳಾ ಆಯೋಗ ಈ ಸಂಬಂಧ ಇಬ್ಬರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದೆ.


ರಾಜಸ್ಥಾನದಲ್ಲಿ ಸಾಲ ಮರುಪಾವತಿಗಾಗಿ ಸ್ಟಾಂಪ್ ಪೇಪರ್ ಮೂಲಕ ಹೆಣ್ಣು ಮಕ್ಕಳನ್ನು ಹರಾಜು ಹಾಕಿರುವ ಪ್ರಕರಣ ಬೆಳಕಿಗೆ ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ (Ashok GHehlot Govt) ನೋಟಿಸ್ ಜಾರಿ ಮಾಡಿದ್ದು, ಅಂತಹ ಅಪರಾಧಗಳ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಮತ್ತು ಅವುಗಳನ್ನು ತಡೆಯಲು ಯಾವ ಕಾರ್ಯವಿಧಾನವಿದೆ ಎಂದು NHRC ಸರ್ಕಾರವನ್ನು ಕೇಳಿದೆ. ರಾಜಸ್ಥಾನದ ಗ್ರಾಮ ಪಂಚಾಯತ್‌ಗಳ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ನೀಡುವಂತೆ ಆಯೋಗವು ಸರ್ಕಾರವನ್ನು ಕೇಳಿದೆ. ಅಲ್ಲದೆ ಇಬ್ಬರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: 'ವೈಫ್ ಸ್ವಾಪ್ ಗೇಮ್': ಬೇರೆಯವರೊಂದಿಗೆ ಲೈಂಗಿಕತೆ ನಿರಾಕರಿಸಿದ ಪತ್ನಿ ಮೇಲೆ ಹಲ್ಲೆ; ದೂರು ದಾಖಲು

ರಾಜ್ಯದ ಭಿಲ್ವಾರಾ ಜಿಲ್ಲೆಯಲ್ಲಿ ಸಾಲ ಮರುಪಾವತಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಲು ಕೆಳಜಾತಿ ಸಮುದಾಯಗಳ ಹೆಣ್ಣುಮಕ್ಕಳನ್ನು ಹರಾಜು ಹಾಕಿರುವ ಕುರಿತು ಹಲವಾರು ಮಾಧ್ಯಮ ವರದಿಗಳನ್ನು ನೋಡಿರುವುದಾಗಿ ಮಹಿಳಾ ಸಮಿತಿ ಹೇಳಿದೆ. ಎನ್‌ಸಿಡಬ್ಲ್ಯು ಮುಖ್ಯಸ್ಥೆ ರೇಖಾ ಶರ್ಮಾ ಅವರು ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ನಾಲ್ಕು ವಾರಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ನೀಡುವಂತೆ ಕೋರಿದ್ದಾರೆ.

ಛಾಪಾಕಾಗದವಿಟ್ಟು ಹೆಣ್ಣು ಮಕ್ಕಳ ಹರಾಜು, ತಾಯಂದಿರ ಮೇಲೆ ಅತ್ಯಾಚಾರ
ಇತ್ತೀಚಿನ ರಾಜಸ್ತಾನದ ಮಾಧ್ಯಮಗಳು ವರದಿ ಮಾಡಿದಂತೆ, ರಾಜಸ್ಥಾನದ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳನ್ನು ಹರಾಜು ಹಾಕಲು "ಜಾತಿ" ಪಂಚಾಯತ್‌ಗಳನ್ನು ಹೇಗೆ ಬಳಸಲಾಗುತ್ತಿದೆ ಎಂದು ಹೇಳಲಾಗಿತ್ತು. ಬಡ ಕುಟುಂಬಗಳಿಗೆ ಸಾಲ ನೀಡುವಾಗ, ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಅವರ ಹೆಣ್ಣುಮಕ್ಕಳನ್ನು "ಸೆಟಲ್ಮೆಂಟ್" ಎಂದು ಹರಾಜು ಹಾಕಲಾಗುತ್ತದೆ ಎಂದು ಸ್ಟಾಂಪ್ ಪೇಪರ್ನಲ್ಲಿ ಬರೆಯಲಾಗುತ್ತದೆ. ಇದರ ಅಡಿಯಲ್ಲಿ, ಎಂಟರಿಂದ 18 ವರ್ಷದೊಳಗಿನ ಹುಡುಗಿಯರ ಹರಾಜು ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜಸ್ತಾನ: ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ, ವಿಫಲಳಾದ ಸೊಸೆಗೆ ಚಿತ್ರಹಿಂಸೆ; ಪೋಷಕರಿಗೆ 10 ಲಕ್ಷ ರೂ. ದಂಡ

ರಾಜಸ್ತಾನದ ಭಿಲ್ವಾರಾ ಜಿಲ್ಲೆಯ ಪಾಂಡರ್ ಗ್ರಾಮದಲ್ಲಿ ಇಂತಹುದೊಂದು ವಿಲಕ್ಷಣ ಹರಾಜು ಪ್ರಕ್ರಿಯೆ ನಡೆದಿದ್ದು, ಇಲ್ಲಿನ ಹಲವು ಬಡಾವಣೆಗಳಲ್ಲಿ ಬಡ ಕುಟುಂಬದ ಹೆಣ್ಣುಮಕ್ಕಳನ್ನು ಜನರು ಸ್ಟಾಂಪ್ ಪೇಪರ್ ಮೇಲೆ ಖರೀದಿಸಿ ನಂತರ ಮಾರಾಟ ಮಾಡುತ್ತಾರೆ. ವಿದೇಶಗಳಲ್ಲದೆ ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಮುಂಬೈಗೆ ಹೆಣ್ಣುಮಕ್ಕಳನ್ನು ಮಾರಾಟ ಮಾಡಲಾಗಿದೆ. ಬಡ ಕುಟುಂಬಗಳಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಇದ್ದಾಗ ಮಧ್ಯವರ್ತಿಗಳು ಪಂಚಾಯಿತಿಗಳ ಮೊರೆ ಹೋಗುತ್ತಾರೆ. ಹರಾಜಿನ ಮೂಲಕ ಹೆಣ್ಣು ಮಕ್ಕಳನ್ನು ಗುಲಾಮರನ್ನಾಗಿಸುವ ಕೆಲಸ ಶುರುವಾಗುವುದೇ ಇಲ್ಲಿಂದ. ಮಧ್ಯವರ್ತಿಗಳು ಸ್ಟಾಂಪ್ ಪೇಪರ್ ತೋರಿಸಿ ಬಾಕಿ ಸಾಲದ ವಿರುದ್ಧ ಹುಡುಗಿಯರನ್ನು ಹರಾಜು ಹಾಕುತ್ತಾರೆ. ಪಂಚಾಯಿತಿಗಳು ಸಾಲವನ್ನು ಪಾವತಿಸಲು ಕುಟುಂಬಕ್ಕೆ ಆದೇಶಿಸುತ್ತವೆ, ಇಲ್ಲದಿದ್ದರೆ ಮಗಳನ್ನು ಹರಾಜು ಹಾಕಲಾಗುತ್ತದೆ ಅಥವಾ ಆಕೆಯ ತಾಯಿಯ ಮೇಲೆ ಅತ್ಯಾಚಾರವೆಸಗಲಾಗುವುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಮೂರ್ಛೆ ಹೋಗುವವರೆಗೆ ಸಾಮೂಹಿಕವಾಗಿ ಅತ್ಯಾಚಾರ ಗೈದಿದ್ದರು: ಸಂತ್ರಸ್ಥೆ ಶಾಕಿಂಗ್ ಹೇಳಿಕೆ
ಮಾಧ್ಯಮಗಳ ವರದಿಗೆ ಇಂಬು ನೀಡುವಂತೆ ಇದೇ ವಿಚಾರವಾಗಿ ಮಾತನಾಡಿದ್ದ ಸಂತ್ರಸ್ಥೆಯೊಬ್ಬರು, 'ನನ್ನನ್ನು 21 ನೇ ವಯಸ್ಸಿನಲ್ಲಿ ಒತ್ತೆಯಾಳಾಗಿ ಮಾಡಲಾಯಿತು. ಸಾಲ ಮರುಪಾವತಿಗಾಗಿ ನನ್ನನ್ನು ಮಾರಾಟ ಮಾಡಲಾಯಿತು. ಓಡಿಹೋಗಲು ಯತ್ನಿಸಿದರೂ ಅದು ಸಾಧ್ಯವಾಗದೇ ಸಿಕ್ಕಿಬಿದ್ದಿದ್ದೇನೆ. ಒಮ್ಮೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ನಾನು ಮೂರ್ಛೆಹೋಗುವವರೆಗೂ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಪ್ರತಿದಿನವೂ ಸಾವಿಗಿಂತ ಕೆಟ್ಟ ದೃಶ್ಯ ಕಾಣುತ್ತಿದ್ದೆ. ಈ ಎಲ್ಲಾ ನಿರ್ಧಾರಗಳನ್ನು ಸ್ಥಳೀಯ ಪಂಚಾಯತ್ ನ ಒತ್ತಡದ ಮೇರೆಗೆ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಮಾನವ ಹಕ್ಕು ಆಯೋಗ
ಈ ಪ್ರಕರಣ ಸಂಬಂಧ ಮಾನವಹಕ್ಕು ಆಯೋಗ (ಎನ್‌ಎಚ್‌ಆರ್‌ಸಿ) ರಾಜಸ್ಥಾನ ಸರ್ಕಾರಕ್ಕೆ ಸ್ವಯಂ ಪ್ರೇರಿತವಾಗಿ ನೋಟಿಸ್ ಜಾರಿ ಮಾಡಿದ್ದು, ಈ ಕುರಿತು ವಿಸ್ತೃತ ವರದಿ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಎನ್‌ಎಚ್‌ಆರ್‌ಸಿ ವರದಿಯಲ್ಲಿ, ಈ ಅಪರಾಧದ ವಿರುದ್ಧ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ, ಮಾಡದಿದ್ದರೆ, ಅದನ್ನು ತಡೆಯಲು ಯಾವ ಕ್ರಿಯಾ ಯೋಜನೆ ಹೊಂದಿದೆ ಎಂಬುದನ್ನು ತಿಳಿಸಬೇಕು ಎಂದು ಹೇಳಿದೆ. (KANNAD PRABHA)

538 Days ago